ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಜಮ್ಮು ಮತ್ತು ಕಾಶ್ಮೀರ ನಿಯೋಜಿತ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಿಗೆ ಕೇಂದ್ರಾಡಳಿತ ಪ್ರದೇಶವನ್ನು ನಡೆಸುವಾಗ ಯಾವುದೇ ಸಮಸ್ಯೆ ಎದುರಾದರೆ ಅವರ ಸಹಾಯ ಪಡೆಯುವಂತೆ ಭಾನುವಾರ(ಅಕ್ಟೋಬರ್ 13) ಸಲಹೆ ನೀಡಿದ್ದಾರೆ.(Politics)
ದೆಹಲಿಯಂತೆಯೇ ಜಮ್ಮು ಮತ್ತು ಕಾಶ್ಮೀರವನ್ನು ಅರ್ಧ ರಾಜ್ಯವನ್ನಾಗಿ ಮಾಡಲಾಗಿದೆ. ಎಲ್ಲಾ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್‌ಗೆ ನೀಡಲಾಗಿದೆ. ನೀವು ಕೆಲಸ ಮಾಡುವಲ್ಲಿ ಯಾವುದೇ ಸಮಸ್ಯೆ ಎದುರಾದರೆ ನನ್ನನ್ನು ಕೇಳಿ, ದೆಹಲಿಯನ್ನು ಹೇಗೆ ನಡೆಸಬೇಕೆಂದು ನನಗೆ ತಿಳಿದಿದೆ ಎಂದು ನಾನು ಓಮರ್ ಅಬ್ದುಲ್ಲಾ ಅವರಿಗೆ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಎಎಪಿ ಒಮರ್ ಅಬ್ದುಲ್ಲಾ ಸರ್ಕಾರವನ್ನು ಬೆಂಬಲಿಸಿರುವುದರಿಂದ ನಮ್ಮ ಮೆಹರಾಜ್ ಮಲಿಕ್ (ಎಎಪಿ ಶಾಸಕ) ಅವರಿಗೆ ಒಮರ್ ಅಬ್ದುಲ್ಲಾ ಅವರ ಸರ್ಕಾರದಲ್ಲಿ ಜವಾಬ್ದಾರಿಯನ್ನು ನೀಡಲಾಗುವುದು ಎಂದು ಭಾವಿಸುತ್ತೇನೆ. ಇದರಿಂದ ದೋಡಾ ಜತೆಗೆ ಇಡೀ ಜಮ್ಮು ಮತ್ತು ಕಾಶ್ಮೀರಕ್ಕೆ ಸೇವೆ ಸಲ್ಲಿಸಬಹುದು ಎಂದು ತಿಳಿಸಿದರು.
ಎಎಪಿ ಅಭ್ಯರ್ಥಿ ಮೆಹ್ರಾಜ್ ಮಲಿಕ್ ಅವರು ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ದೋಡಾದಿಂದ ಸ್ಪರ್ಧಿಸಿದ್ದರು. ಬಿಜೆಪಿಯ ಗಜಯ್ ಸಿಂಗ್ ರಾಣಾ ಅವರನ್ನು 4,538 ಮತಗಳ ಅಂತರದಿಂದ ಸೋಲಿಸುವ ಮೂಲಕ ಎಎಪಿ ಪಕ್ಷದ ಮೊದಲ ವಿಜಯವನ್ನು ದಾಖಲಿಸಿದರು.
ಕಳೆದ ವಾರ ಒಮರ್ ಅಬ್ದುಲ್ಲಾ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಅವರು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿದರು. ಹಾಗೂ ಪಕ್ಷವು ಸ್ವೀಕರಿಸಿದ ಬೆಂಬಲದ ಪತ್ರಗಳನ್ನು ಸಲ್ಲಿಸುತ್ತಿದ್ದಂತೆ ಕೇಂದ್ರಾಡಳಿತ ಪ್ರದೇಶದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ದಾಖಲೆಗಳನ್ನು ಪೂರ್ಣಗೊಳಿಸಲು 2-3 ದಿನಗಳು ತೆಗೆದುಕೊಳ್ಳಬಹುದಾದ್ದರಿಂದ ಪ್ರಮಾಣ ವಚನ ಸಮಾರಂಭವನ್ನು ಬಹುಶಃ ಮಂಗಳವಾರ (ಅಕ್ಟೋಬರ್ 15) ಅಥವಾ ಬುಧವಾರ (ಅಕ್ಟೋಬರ್ 16) ನಡೆಸಬಹುದು ಎಂದು ಅಬ್ದುಲ್ಲಾ ಹೇಳಿದ್ದರು.(ಏಜೆನ್ಸೀಸ್)