ಚನ್ನಪಟ್ಟಣ: ಚುನಾವಣೆ ಹೊರತುಪಡಿಸಿದ ವಿಚಾರಗಳಿಗೂ ರಾಜಕಾರಣ ಸಲ್ಲದು. ಗ್ರಾಮೀಣ ಜನತೆ ರಾಜಕೀಯ ಬದಿಗಿಟ್ಟು ಸೌಹಾದರ್ಯುತ ಜೀವನ ನಡೆಸಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.
ತಿಮ್ಮಸಂದ್ರದಲ್ಲಿ ಪಶು ಆಸ್ಪತ್ರೆ ನೂತನ ಕಟ್ಟಡ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆ ನಂತರ ರಾಜಕಾರಣ ನಡೆಸಬಾರದು. ಗ್ರಾಮದ ಅಭಿವೃದ್ಧಿಗೆ ಪಕ್ಷಾತೀತವಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಣ್ಣ ವಿಚಾರಕ್ಕೂ ರಾಜಕೀಯ, ದ್ವೇಷ, ಅಸೂಯೆ ಗ್ರಾಮಗಳ ಅಭಿವೃದ್ಧಿಗೆ ಮಾರಕ. ಈ ನಿಟ್ಟಿನಲ್ಲಿ ರಾಜಕೀಯ ಬದಿಗಿಟ್ಟು ಗ್ರಾಮಗಳ ಹಿತಕ್ಕಾಗಿ ಎಲ್ಲರೂ ದುಡಿಯಬೇಕು ಎಂದು ಕರೆ ನೀಡಿದರು.
ತಾಲೂಕಿನ ಪ್ರತಿಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಅನುದಾನ ಹಂಚಿಕೆಯ ವಿಚಾರಕ್ಕೆ ಕಾರ್ಯಕರ್ತರು ಮನಸ್ತಾಪ ಮಾಡಿಕೊಳ್ಳಬಾರದು.
ಈ ಬೆಳವಣಿಗೆಗಳು ನನ್ನ ಹೆಸರಿಗೆ ಕಳಂಕ ತರಲಿವೆ. ಕಷ್ಟಸುಖ ಹಂಚಿಕೊಳ್ಳುವ ಹೃದಯ ವೈಶಾಲ್ಯವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಚುನಾವಣೆಗಳು ಇಂದು ಬರುತ್ತವೆ ನಾಳೆ ಹೋಗುತ್ತವೆ. ಇದರ ಮಧ್ಯೆ ರಾಜಕೀಯದ ಹೊರತಾಗಿ ನಿಮ್ಮಬದುಕು ಕಟ್ಟಿಕೊಳ್ಳಲು ಎಲ್ಲರೂ ಒಗ್ಗೂಡಬೇಕು ಎಂದರು.
ಪಶು ಆಸ್ಪತ್ರೆ ಲೋಕಾರ್ಪಣೆ : ತಿಮ್ಮಸಂದ್ರದಲ್ಲಿ ಪಶು ಆಸ್ಪತ್ರೆಯ ನೂತನ ಕಟ್ಟಡ ಹಾಗೂ ಗ್ರಾಮದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು. ಗ್ರಾಮಕ್ಕೆ ಆಗಮಿಸಿದ ಅವರನ್ನು ಎತ್ತಿನಬಂಡಿಯ ಮೂಲಕ ಮೆರವಣಿಗೆ ಮಾಡಲಾಯಿತು. ಸುತ್ತಮುತ್ತಲ ನೂರಾರು ಗ್ರಾಮಸ್ಥರು ಎಚ್‌ಡಿಕೆಗೆ ಅಹವಾಲುಗಳನ್ನು ಸಲ್ಲಿಸಿದರು.
ತಹಸೀಲ್ದಾರ್ ಎಲ್.ನಾಗೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಜಯಮುತ್ತು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕುರುದೊಡ್ಡಿ ಜಯರಾಂ, ಬಮುಲ್ ಮಾಜಿ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್, ಜೆಡಿಎಸ್ ಮುಖಂಡರಾದ ಹಾಪ್‌ಕಾಮ್ಸ್ ದೇವರಾಜು, ನರ್ಸರಿ ಲೋಕೇಶ್, ಭಾನುಪ್ರಸಾದ್, ಮೋಳೆದೊಡ್ಡಿ ಬಿಳಿಯಪ್ಪ, ಪುಟ್ಟಚಂದ್ರು, ತಗಚಗೆರೆ ಪವನ್ ಸೇರಿ ಹಲವರು ಉಪಸ್ಥಿತರಿದ್ದರು.