ನ್ಯೂಸ್

ಮಾಜಿ ಸಿಎಂ SM Krishna ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ; ಕೇಳಿಬಂತು ಕೂಗು

ಬೆಂಗಳೂರು: ಮಾಜಿ ಸಿಎಂ, ರಾಷ್ಟ್ರಕಂಡ ಧೀಮಂತ ನಾಯಕ ಎಸ್​.ಎಂ. ಕೃಷ್ಣ (SM Krishna) ಅವರು ಡಿಸೆಂಬರ್​ 10ರಂದು  ಇಹಲೋಕ ತ್ಯಜಿಸಿದ್ದರು. ಮೃತರ ಅಂತ್ಯಕ್ರಿಯೆಯು ಅವರ ಹುಟ್ಟೂರಾದ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದಿದ್ದು, ಮೊಮ್ಮಗ ಅಮರ್ತ್ಯ ವಿಧಿವಿಧಾನಗಳನ್ನು ನೆರೆವೇರಿಸಿದರು.

ಎಸ್​. ಎಂ. ಕೃಷ್ಣ (SM Krishna) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ರಾಜ್ಯ ಸರ್ಕಾರ ಗೌರವಿಸಬೇಕೆಂದು ಕೂಗು ಕೇಳಿ ಬಂದಿದ್ದು, ಈ ಬಗ್ಗೆ ವಿಪಕ್ಷ ನಾಯಕ ಆರ್​. ಅಶೋಕ್​ "ಕರ್ನಾಟಕ ರತ್ನ ಎಸ್.ಎಂ.ಕೃಷ್ಣ" ಟ್ವೀಟ್​ ಮಾಡಿ ಆಗ್ರಹಿಸಿದ್ದಾರೆ.

ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ಧೀಮಂತ ನಾಯಕರು, ಮಾಜಿ ಮುಖ್ಯಮಂತ್ರಿ ಶ್ರೀ ಎಸ್‌.ಎಂ.ಕೃಷ್ಣ ಅವರ ನಿಧನದಿಂದ ಇಡೀ ಕರ್ನಾಟಕ ಶೋಕತಪ್ತವಾಗಿದ್ದು, ನಾಡಿನುದ್ದಕ್ಕೂ ಜನಸಾಮಾನ್ಯರು ಕಂಬನಿ ಮಿಡಿಯುತ್ತಿದ್ದಾರೆ.

ಶಾಸಕ, ಸಚಿವ, ಸ್ಪೀಕರ್‌, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ಹೀಗೆ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಜೊತೆಗೆ, ಜನರ ಬದುಕಿನ ಸುಧಾರಣೆಗಾಗಿ, ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಅವರು ಅಪಾರವಾಗಿ ಶ್ರಮಿಸಿದ್ದರು. ರಾಜಧಾನಿ ಬೆಂಗಳೂರಿಗೆ ಸಿಲಿಕಾನ್‌ ವ್ಯಾಲಿ ಹಾಗೂ ಐಟಿ ಕೇಂದ್ರದ ಸ್ಥಾನಮಾನ ನೀಡುವಲ್ಲಿ ಅವರ ಪಾತ್ರ ಗಣನೀಯ. ವಿದೇಶಾಂಗ ಸಚಿವರಾಗಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ಸೇವೆ ಸಲ್ಲಿಸಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಶ್ರೀ ಎಸ್‌.ಎಂ.ಕೃಷ್ಣ ಅವರು ನಾಡಿನ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ, ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ʼಕರ್ನಾಟಕ ರತ್ನʼ (ಮರಣೋತ್ತರ) ನೀಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ. ಆದ್ದರಿಂದ ತಾವು ಈ ಸಲಹೆಯನ್ನು ಪರಿಗಣಿಸಿ ಶ್ರೀಯುತರಿಗೆ ʼಕರ್ನಾಟಕ ರತ್ನʼ ನೀಡಿ ಗೌರವ ಸಲ್ಲಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.