ನ್ಯೂಸ್

ಸೆಕ್ಸ್ ಸಿಡಿ ಪ್ರಕರಣ; ಸಿಕ್ಕಿ ಬಿದ್ದವರ ಪೈಕಿ ಇಬ್ಬರ ತೀವ್ರ ವಿಚಾರಣೆ, ಎಫ್​ಎಸ್ಎಲ್​ ಕೇಂದ್ರದಲ್ಲೇ ಫುಲ್​ ಡ್ರಿಲ್​

ಬೆಂಗಳೂರು: ಮಾಜಿ ಸಚಿವರೊಬ್ಬರ ಸೆಕ್ಸ್ ಸಿಡಿ ಪ್ರಕರಣ ಸಂಬಂಧ ವಶಕ್ಕೆ ಪಡೆಯಲಾಗಿರುವ ಇಬ್ಬರನ್ನು ಎಸ್​ಐಟಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಎಫ್​ಎಸ್​ಎಲ್​ ಕೇಂದ್ರದಲ್ಲೇ ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳಿ ಫುಲ್​ ಡ್ರಿಲ್​ ನಡೆಸುತ್ತಿದೆ.

ಸಿಡಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈ ಇಬ್ಬರ ಬಗ್ಗೆ ಹಲವು ದಿನಗಳಿಂದ ಮಾಹಿತಿ ಕಲೆ ಹಾಕಿದ್ದ ಪೊಲೀಸರು, ಇವರ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಿದ್ದರು. ಈ ಪ್ರಕರಣದಲ್ಲಿ ಇವರಿಬ್ಬರ ಪಾತ್ರ ತುಂಬಾ ಪ್ರಮುಖವಾಗಿದೆ ಎಂಬ ಸಂದೇಹ ಪೊಲೀಸರಿಗೆ ಮೊದಲೇ ಇದ್ದಿದ್ದರಿಂದ ಸೂಕ್ಷ್ಮವಾಗಿ ಗಮನಿಸುತ್ತಿದ್ದರು.

ಎಸ್​​ಐಟಿ ಟೀಂ ರಚನೆ ಆದ ಕೆಲವೇ ಗಂಟೆಗಳಲ್ಲಿ ಇವರಿಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಇಬ್ಬರ ಮೊಬೈಲ್​ ಫೋನ್​ಗಳನ್ನೂ ವಶಕ್ಕೆ ಪಡೆದುಕೊಂಡು ಅದರ ಡಾಟಾ ಸಂಗ್ರಹಕ್ಕೆ ರವಾನಿಸಿದ್ದಾರೆ. ಇನ್ನು ಮಡಿವಾಳದ ಎಫ್​ಎಸ್​ಎಲ್​ ಕೇಂದ್ರದಲ್ಲಿ ಇವರಿಬ್ಬರನ್ನು ಸತತವಾಗಿ ಪ್ರಶ್ನಿಸಲಾಗುತ್ತಿದೆ.

ಸಿಡಿಯನ್ನ ಮೊದಲು ನೀವು ಯಾರ ಬಳಿ ನೋಡಿದ್ರಿ? ಸಿಡಿಯನ್ನ ನಿಮಗೆ ಕೊಟ್ಟವರು ಯಾರು? ಸಿಡಿಯನ್ನ ನಿಮಗೆ ಯಾರ ಬಳಿ ಕೊಡಲು ಹೇಳಿದರು? ಅವರು ಏನಾದರೂ ನಿಮಗೆ ಹಣದ ಆಮಿಷವೊಡ್ಡಿದ್ರಾ? ಇನ್ನು ನಿಮ್ಮ ಜೊತೆ ಬೇರೆ ಯಾರಾದರೂ ಕೈ ಜೋಡಿಸಿದ್ದಾರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿರುವ ಎಸ್​ಐಟಿ ತಂಡ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದೆ.