ನ್ಯೂಸ್

24 ಗಂಟೆಗಳಲ್ಲಿ 3 ಪಕ್ಷದ ಪದಾಧಿಕಾರಿಗಳ ಹತ್ಯೆ; ಆಡಳಿತ ಪಕ್ಷ ಡಿಎಂಕೆ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ

ತಮಿಳುನಾಡು: ಭಾನುವಾರ (ಜು.29) ತಮಿಳುನಾಡಿನಲ್ಲಿ 24 ಗಂಟೆ ಕಳೆಯುವುದದೊಳಗೆ ಮೂರು ಪಕ್ಷದ ಪದಾಧಿಕಾರಿಗಳ ಹತ್ಯೆ ಸಂಭವಿಸಿದ್ದು, ಮೂರು ಪಾರ್ಟಿಯ ನಾಯಕರು ತಮಿಳುನಾಡಿನ ಸಿಎಂ ಸ್ಟಾಲಿನ್ ಹಾಗೂ ಕಾನೂನು ಸುವ್ಯವಸ್ಥೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಐಎಡಿಎಂಕೆ, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ಪ್ರತ್ಯೇಕ ರಾಜಕಾರಣಿಗಳನ್ನು ಕೊಲೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಆಯಾ ಪಕ್ಷದ ನಾಯಕರು ಆಡಳಿತ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

ಈ ಘಟನೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ತಮ್ಮ ಎಕ್ಸ್‌ ಖಾತೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೆಲ್ವಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ಶಿವಗಂಗೈ ಸಹಕಾರಿ ವಿಭಾಗದ ಜಿಲ್ಲಾ ಕಾರ್ಯದರ್ಶಿ ಸೆಲ್ವಕುಮಾರ್​ರನ್ನು ನಿನ್ನೆ ರಾತ್ರಿ ಸಮಾಜ ವಿರೋಧಿಗಳು ಕೊಲೆ ಮಾಡಿರುವುದು ಆಘಾತಕಾರಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಅವರ ಕುಟುಂಬದವರ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ಡಿಎಂಕೆ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯ ಕೊಲೆಗಳ ರಾಜಧಾನಿಯಾಗಿದೆ ಎಂದು ಆರೋಪಿಸಿದರು.

''ಸಮಾಜ ವಿರೋಧಿಗಳಿಗೆ ಸರ್ಕಾರ, ಪೊಲೀಸರ ಭಯವಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರನ್ನು ಕೈಯಲ್ಲಿಟ್ಟುಕೊಂಡು ಮುಖ್ಯಮಂತ್ರಿ ಹಗಲು ರಾಜಕೀಯ ನಾಟಕವಾಡುತ್ತಿದ್ದಾರೆ. ಇತಿಹಾಸದಲ್ಲಿ ಎಂದೂ ಈ ರೀತಿ ಆಗಿರಲ್ಲಿಲ್ಲ. ಪೊಲೀಸರನ್ನು ಕೂಲಿ ಇಲಾಖೆಯಾಗಿ ಪರಿವರ್ತಿಸಿದ್ದಾರೆ. ಇಡೀ ರಾಜ್ಯದ ಜನತೆ ಒಂದು ಕುಟುಂಬಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿರುವ ಹೀನಾಯ ಪರಿಸ್ಥಿಯಲ್ಲಿ ಸಿಎಂ ಆಗಿ ಮುಂದುವರೆಯಲು ಸ್ಟಾಲಿನ್​ರವರಿಗೆ ಯಾವ ನೈತಿಕ ಹಕ್ಕಿದೆ ಎಂದು ಅವರೇ ಯೋಚಿಸಲಿ ಎಂದು ಅಣ್ಣಮಲೈ ಪ್ರಶ್ನಿಸಿದ್ದಾರೆ.

ಇದೇ ರೀತಿ ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್​ ಹಾಗೂ ಬಿಜೆಪಿ ವಕ್ತಾರ ಶೆಹಜಾದ್​ ಪೂನ್​ವಾಲಾ ಸಿಎಂ ಎಂ.ಕೆ. ಸ್ಟಾಲಿನ್ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಸದ್ಯದ ವರದಿಗಳ ಪ್ರಕಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆ ಮತ್ತಷ್ಟು ಚುರುಕುಗೊಂಡಿದೆ,(ಏಜೆನ್ಸೀಸ್).