ಬ್ಯಾಕೋಡು: ಇತಿಹಾಸದಲ್ಲಿ ಮಹಾತ್ಮ ಗಾಂಧಿ ಹೇಳಿರುವುದು ಮಾನವ ಕೇಂದ್ರಿಕೃತ ಆರ್ಥಿಕತೆಯನ್ನು. ಆದರೆ ವಾಸ್ತವದಲ್ಲಿ ಇದು ಜಾರಿ ಆಗದಿರುವುದು ದುರದೃಷ್ಟಕರ ಎಂದು ಸಿದ್ದನಗೌಡ ಪಾಟೀಲ್ ಹೇಳಿದರು.
ಸಾಗರ ತಾಲೂಕಿನ ತುಮರಿ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಹಾ.ಮ.ಭಟ್ ನೆನಪಿನ ಹಬ್ಬ ಹಾಗೂ ಶಾಂತವೇರಿ ಗೋಪಾಲ ಗೌಡರ ಶತಮಾನೋತ್ಸವ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಈ ದೇಶದ ಸ್ವಾತಂತ್ರ್ಯ ಹೋರಾಟವು ಟಾಟಾ, ಬಿರ್ಲಾ ಹಾಗೂ ಕಾಗೋಡು ಚಳುವಳಿಯ ಕಟ್ಟಕಡೆಯ ಗೇಣಿ ರೈತನದ್ದು ಸಹ ಆಗಿತ್ತು. ಸಮ ಸಮಾಜಕ್ಕಾಗಿ ಚಿಂತಕರು ನಡೆಸುವ ಹೋರಾಟ, ರಾಜಕೀಯ ಸ್ವಾತಂತ್ರ್ಯದ ಜತೆಗೆ ಆರ್ಥಿಕ ಸ್ವಾತಂತ್ರ್ಯ ಬೇಕು ಎಂಬುದು ಗಾಂಧಿ ಅವರ ಆಶಯವಾಗಿತ್ತು. ಸಾಮಾಜಿಕ ಸ್ವಾತಂತ್ರ್ಯ ಇಲ್ಲದ ರಾಜಕೀಯ ಸ್ವಾತಂತ್ರ್ಯವು ಸಮಾಜದಲ್ಲಿ ಶೂನ್ಯ ಎಂದು ಅಂಬೇಡ್ಕರ್ ಸಹ ಹೇಳಿದ್ದರು ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಭೂಮಿ ಮರು ವಿತರಣೆ ಬಗ್ಗೆ ಶಾಂತವೇರಿ ಗೋಪಾಲ ಗೌಡರು ಹಿಂದೆಯೇ ಹೇಳಿದ್ದರು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ವಿಚಾರಗಳನ್ನು ಬದಿಗೊತ್ತಿ ರೈತರ ಮೇಲೆ ಕೃಷಿ ಕಾಯ್ದೆ ಹೇರಿ ಪುನಃ ಭೂಮಿ ವಂಚಿಸುತ್ತಿದ್ದಾರೆ ಎಂದರು.
ಲೇಖಕಿ ಯಮುನಾ ಗಾಂವ್ಕರ್ ಮಾತನಾಡಿ, ಭಾರತದ ಇತಿಹಾಸದಲ್ಲಿ ಆರ್ಥಿಕ ಸುಧಾರಣೆಗಿಂತ ಹೆಚಿನ ಹೋರಾಟಗಳು ಸಮಾಜ ಸುಧಾರಣೆಗಾಗಿ ನಡೆದಿವೆ. ಹಿಂದು ಧರ್ಮದಲ್ಲಿ ಸತಿ ಸಹಗಮನ, ಜಾತಿ ವ್ಯವಸ್ಥೆ, ಅವ್ಯವಸ್ಥೆ ಕಳಚಬೇಕಿದೆ. ಇದಕ್ಕಾಗಿ ಸಾಕಷ್ಟು ಚಳವಳಿಗಳು ನಡೆದಿವೆ ಎಂದು ತಿಳಿಸಿದರು.
ಅಭಿವ್ಯಕ್ತಿ ಬಳಗದ ಎಚ್.ಎಂ.ರಾಘವೇಂದ್ರ, ಎಲ್.ಮುಕುಂದರಾಜ್, ಬಿ.ಚಂದ್ರಿಕಾ, ಕರಿಯಪ್ಪ, ಎಚ್.ಎಲ್.ಹನುಮಂತಯ್ಯ ಸ್ವಾಮಿ, ಬಿ.ಆರ್.ಜಯಂತ್, ಜಿ.ವಿ.ಅನಂತಮೂರ್ತಿ, ಜಯಪ್ರಕಾಶ್ ಮಾವಿನಕುಳಿ ಇದ್ದರು.