ಚಿಕ್ಕಮಗಳೂರು: ನಗರದ 2ನೇ ವಾರ್ಡಿನಲ್ಲಿ ಮೂಲ ಸೌಕರ್ಯ ಕೊರತೆಯಿಂದ ತೀವ್ರ ಸಮಸ್ಯೆ ಎದುರಾಗಿದೆ. ಒಳಚರಂಡಿ, ರಸ್ತೆ, ನೀರು, ಶುದ್ಧ ನೀರಿನ ಘಟಕ ಹೀಗೆ ಯಾವ ಸೌಲಭ್ಯಗಳೂ ಸರಿಯಿಲ್ಲ. ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ.
ಕಲ್ಯಾಣ ನಗರದಲ್ಲಿ 1200ಕ್ಕೂ ಹೆಚ್ಚು ಮನೆಗಳಿದ್ದು, 4000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬಡಾವಣೆಯು ನಗರಸಭೆ ವ್ಯಾಪ್ತಿಗೆ ಸೇರಿ ಸುಮಾರು ವರ್ಷಗಳೇ ಕಳೆದಿವೆ. ಆದರೆ ಸ್ಥಳೀಯರಿಗೆ ಈವರೆಗೂ ಸಮರ್ಪಕ ಮೂಲ ಸೌಲಭ್ಯಗಳು ದೊರೆತಿಲ್ಲ.
ವಾರ್ಡ್‌ನ ಡಿಸಿ ಲೇಔಟ್‌ಗೆ ದೊಡ್ಡ ಇತಿಹಾಸವಿದೆ. ಎರಡು ದಶಕಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಬಡಾವಣೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರಿಂದ ಅದೇ ಹೆಸರನ್ನು ನಾಮಕರಣ ಮಾಡಲಾಗಿದೆ. ಬಡಾವಣೆಗೆ ಇನ್ನೇನು ಎಲ್ಲ ರೀತಿಯ ಸೌಲಭ್ಯ ದೊರೆಯುತ್ತವೆ ಎಂಬ ನಿರೀಕ್ಷೆ ನಿವಾಸಿಗಳದಾಗಿತ್ತು.
ಚಿಕ್ಕಮಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ 2ನೇ ವಾರ್ಡಿನಲ್ಲಿ ಅಂಗನವಾಡಿ ಕೇಂದ್ರ, ಶಾಲಾ ಕಾಲೇಜು, ವಿದ್ಯಾರ್ಥಿ ನಿಲಯ, ಅಂತಾರಾಷ್ಟ್ರೀಯ ಯೋಗ ಮಂದಿರವೂ ಇದೆ. ಇದರ ಸುತ್ತಮುತ್ತ ಇರುವ ಖಾಲಿ ನಿವೇಶನಗಳಲ್ಲಿ ಕೆಲ ಪುಂಡರು ರಾತ್ರಿ ಮದ್ಯ ಸೇವನೆ ಮಾಡಿ ಗಲಾಟೆ ಮಾಡುತ್ತಿದ್ದಾರೆ. ಇದರಿಂದ ನಿವಾಸಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ.
ಒಂದು ಕಾಲದಲ್ಲಿ ಬಿಜೆಪಿ ತೆಕ್ಕೆಯಲ್ಲಿದ್ದ ವಾರ್ಡ್‌ನಲ್ಲಿ ಇದೀಗ ಕಾಂಗ್ರೆಸ್‌ನ ಸದಸ್ಯೆ ಇದ್ದಾರೆ. ಬಡಾವಣೆ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ನಗರಸಭೆಗೆ ಹಲವು ಬಾರಿ ಒತ್ತಾಯಿಸಿದ್ದರೂ ಬಿಜೆಪಿ ಸದಸ್ಯರು ಇರುವ ವಾರ್ಡಿಗೆ ಸಿಕ್ಕಿರುವ ಅನುದಾನದಲ್ಲಿ ಅರ್ಧದಷ್ಟೂ ಸಿಕ್ಕಿಲ್ಲ. ರಾಜಕೀಯ ತಾರತಮ್ಯದಿಂದ ವಾರ್ಡ್ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ನಗರದಲ್ಲಿನ ಇತರೆ ವಾರ್ಡ್‌ಗಳಿಗೆ ಹೋಲಿಕೆ ಮಾಡಿದರೆ 2ನೇ ವಾರ್ಡ್‌ನಲ್ಲಿ ಸಮಸ್ಯೆಗಳು ಗಂಭೀರವಾಗಿವೆ. ನಗರೋತ್ಥಾನ, 15ನೇ ಹಣಕಾಸು, ವಿಶೇಷ ಅನುದಾನದಡಿ ಬೇರೆ ವಾರ್ಡ್‌ಗಳಿಗೆ ಅಗತ್ಯ ಮೀರಿ ಶುದ್ಧ ನೀರಿನ ಘಟಕಗಳನ್ನು ಮಂಜೂರು ಮಾಡಲಾಗಿದೆ. ಆದರೆ ಈ ವಾರ್ಡ್‌ಗೆ ಮಂಜೂರು ಮಾಡಲಾಗುವುದು ಎಂದು ಭರವಸೆಯಷ್ಟೇ ಸಿಕ್ಕಿದೆ.
ವಾರ್ಡಿನಲ್ಲಿರುವ ಜನಸಂಖ್ಯೆಗೆ ತಕ್ಕಂತೆ ಪೌರಕಾರ್ಮಿಕರಿಲ್ಲ. ಆದರೂ ಪ್ರತಿ ಮನೆಗೆ ಹೋಗಿ ಕಸ ಸಂಗ್ರಹ ಮಾಡುವ ಕೆಲಸ ಮಾಡುತ್ತಾರೆ. ಪೌರಕಾರ್ಮಿಕರ ನಿಯೋಜನೆಯಲ್ಲೂ ರಾಜಕೀಯ ಮಾಡಲಾಗುತ್ತಿದೆ. ಇಲ್ಲಿನ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ.
ಕಲ್ಯಾಣ ನಗರದಲ್ಲಿರುವ ಚರಂಡಿ, ರಸ್ತೆಗಳು ಇದುವರೆಗೂ ಅಭಿವೃದ್ಧಿಯನ್ನೇ ಕಂಡಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ತರಾತುರಿಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಿಸಲಾಗಿದೆ. ಅದರಲ್ಲೂ ಕಾಂಗ್ರೆಸ್ ಬೆಂಬಲಿಗರು ಇರುವ ರಸ್ತೆಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ತರಾತುರಿಯಲ್ಲಿ ಮಾಡಿರುವ ಕೆಲಸಗಳು ಕಳಪೆಯಾಗಿವೆ. ಜಲ್ಲಿ ಕಲ್ಲು ಮೇಲೆದ್ದು ಧೂಳುಮಯವಾಗಿದೆ.
ಬಡಾವಣೆಯ ಮನೆಗಳಿಗೆ ಕೊಳವೆಬಾವಿ ನೀರು ಪೂರೈಸಲಾಗುತ್ತಿದೆ. ನೀರಿನಲ್ಲಿ ಫ್ಲೋರೈಡ್ ಅಂಶ ಇರುವುದರಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರಿಗೆ ಮನವಿ ನೀಡಿದಾಗ 15ನೇ ಹಣಕಾಸಿನಲ್ಲಿ ಕೊಡುವುದಾಗಿ ಹೇಳಿದ್ದರು. ಈಗ ನಗರೋತ್ಥಾನ ಯೋಜನೆಯಡಿ ಕೊಡುವುದಾಗಿ ಹೇಳಿದ್ದಾರೆ. ಹೀಗೆ ನೆಪ ಹೇಳುತ್ತಿದ್ದಾರೆಯೇ ಹೊರತು ಬಡಾವಣೆಗೆ ಸೌಲಭ್ಯ ಸಿಗುತ್ತಿಲ್ಲ.
ಉದ್ಯಾನಗಳು ಈವರೆಗೂ ಅಭಿವೃದ್ಧಿ ಕಂಡಿಲ್ಲ. ಬಹುದೊಡ್ಡ ಪಾರ್ಕಿನ ಒತ್ತುವರಿ ತಡೆಗಟ್ಟಲು ಬೇಲಿ ನಿರ್ಮಿಸಲಾಗಿದೆ. ಅದನ್ನು ಅಭಿವೃದ್ಧಿಪಡಿಸಿದ್ದರೆ ವಾಯುವಿಹಾರ, ವಿಶ್ರಾಂತಿ ಪಡೆಯಲು ನೆರವಾಗುತ್ತದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಂಡಿಲ್ಲ. ಶೇ.40ರಷ್ಟು ರಸ್ತೆಗಳು ಅಭಿವೃದ್ಧಿಯನ್ನೇ ಕಂಡಿಲ್ಲ. ಮಳೆ ಬಂದರೆ ಓಡಾಡಲು ಜನರು ಪ್ರಯಾಸಪಡುತ್ತಿದ್ದಾರೆ.
ಬಡಾವಣೆಯ ನಿವಾಸಿಗಳು ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಅಭಿವೃದ್ಧಿ ಆಗಬೇಕಾಗಿರುವ ಕೆಲಸಗಳ ಪಟ್ಟಿ ಮಾಡಿ ಒಟ್ಟು 76 ಲೇಟರ್‌ಹೆಡ್‌ನಲ್ಲಿ ಮನವಿ ನೀಡಲಾಗಿದೆ. ಆದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ವಾರ್ಡ್ ಸದಸ್ಯೆ ಇಂದಿರಾ ಶಂಕರ್ ಆರೋಪಿಸಿದರು.
ಹಣ ಪೋಲು ಮಾಡುವ ಕೆಲಸಗಳಿಗೆ ಆದ್ಯತೆ ನೀಡಿದ್ದು, ಮನೆ ಮನೆಗೆ ಅವೈಜ್ಞಾನಿಕವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಗೃಹಬಳಕೆ ಸಿಲಿಂಡರ್ ಬೆಲೆ ಏರಿಕೆಯಿಂದ ರೋಸಿಹೋಗಿರುವ ಜನರಿಂದ ಹೆಚ್ಚುವರಿಯಾಗಿ ಹಣ ವಸೂಲಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು. ಪ್ರತಿ ಬಾರಿ ಬಿಜೆಪಿ ಸದಸ್ಯರನ್ನು ಗೆಲ್ಲಿಸಿಕೊಂಡು ಬರುತ್ತಿದ್ದ ವಾರ್ಡ್‌ನ ಜನ ಅಭಿವೃದ್ಧಿ ದೃಷ್ಟಿಯಿಂದ ಬದಲಾವಣೆ ಬಯಸಿ ಕಾಂಗ್ರೆಸಿಗನಾದ ನನ್ನನ್ನು ಆಯ್ಕೆ ಮಾಡಿದ್ದಾರೆ. 2ನೇ ವಾರ್ಡಿನ ವ್ಯಾಪ್ತಿಗೆ ಕಲ್ಯಾಣನಗರ, ಡಿಸಿ ಬಡಾವಣೆ, ಸ್ಲಂ ಬೋರ್ಡ್‌ಗಳು ಬರುತ್ತವೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಉದಾಸೀನ ಹೆಚ್ಚಾಗಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಶಾಸಕ ಎಚ್.ಡಿ.ತಮ್ಮಯ್ಯ ಅವರಿಗೆ ಅರಿವಿದೆ. ಇನ್ನಾದರೂ ಅನುದಾನ ಸಿಗುತ್ತದೆಂಬ ನಿರೀಕ್ಷೆ ನನ್ನದು ಎಂದರು.