ನ್ಯೂಸ್

ಹೂಡಿಕೆದಾರರಿಗೆ ಅನಗತ್ಯ, ಕಠಿಣ ನಿಯಂತ್ರಣವಿಲ್ಲದ ನೀತಿ ಖಾತ್ರಿ; ಸಚಿವ ಎಂ.ಬಿ.ಪಾಟೀಲ

ಬೆಂಗಳೂರು: ಹೂಡಿಕೆದಾರರಿಗೆ ನಷ್ಟವಾಗದಂತೆ ಸುಲಲಿತ ವಹಿವಾಟು ಸಂಸ್ಕೃತಿ ಮತ್ತು ಅನಗತ್ಯವಾದ ಯಾವುದೇ ಕಠಿಣ ನಿಯಂತ್ರಣವಿಲ್ಲದಂತಹ ನೀತಿಗಳನ್ನು ಜಾರಿಗೆ ತರುವ ಖಾತ್ರಿ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದಾರೆ.

ರಾಜ್ಯಕ್ಕೆ ಉದ್ಯಮ, ಹೂಡಿಕೆದಾರರ ಆಕರ್ಷಣೆಗೆ ಇಲಾಖೆ ಉನ್ನತಾಧಿಕಾರಿಗಳ ತಂಡದ ಜತೆಗೆ ಅಮೆರಿಕ ಪ್ರವಾಸದಲ್ಲಿರುವ ಅವರು, ಡಲ್ಲಾಸ್ ನಗರದಲ್ಲಿ ಭಾರತೀಯ ಕಾನ್ಸುಲ್ ಜನರಲ್ ಡಿ.ಸಿ.ಮಂಜುನಾಥ್ ಜತೆಗೆ ಭಾನುವಾರ ಸುದೀರ್ಘ ವಿಚಾರ ವಿನಿಮಯ ನಡೆಸಿದರು.

ಕರ್ನಾಟಕ ಸರಕಾರ ಮತ್ತು ಅಮೆರಿಕ ಪರಸ್ಪರ ಲಾಭದಾಯಕವಾಗುವ ರೀತಿಯಲ್ಲಿ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುವ ಒಲವು ಹೊಂದಿವೆ. ಇದಕ್ಕೆ ತಕ್ಕಂತೆ ಕ್ರಮಗಳನ್ನು ಸರ್ಕಾರ ಬದ್ಧವಾಗಿದೆ ಎಂಬ ಭರವಸೆ ನೀಡಿದ್ದಾರೆ.

ಐಟಿ, ಬಿಟಿ, ಎಲೆಕ್ಟ್ರಾನಿಕ್ಸ್, ಸೆಮಿ ಕಂಡಕ್ಟರ್, ವಿದ್ಯುತ್ ಚಾಲಿತ ವಾಹನ ತಯಾರಿಕೆ ಮುಂತಾದ ವಲಯಗಳಲ್ಲಿ ಕರ್ನಾಟಕವು ಪರಿಣತಿ ಹೊಂದಿದೆ. ಈ ಕ್ಷೇತ್ರಗಳಲ್ಲೇ ಅಮೆರಿಕದ ಕಂಪನಿಗಳೊಂದಿಗೆ ಹೆಚ್ಚಿನ ಸಹಭಾಗಿತ್ವ ಸ್ಥಾಪಿಸಿಕೊಳ್ಳುವುದು ಅಪೇಕ್ಷಣೀಯವಾಗಿದೆ.

ಸ್ಪರ್ಧಾತ್ಮಕ ವಾತಾವರಣವಿದ್ದಾಗ ಇದು ಅಗತ್ಯವಾಗಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಹರಿದು ಬರಲಿದೆ. ಚೀನಾ ಸ್ಪರ್ಧೆ ಎದುರಿಸಲು ನಮ್ಮಲ್ಲಿರುವ ಪರಿಣತಿ ಮುನ್ನೆಲೆಗೆ ತರುವ ಅಗತ್ಯವಿದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.

ರಾಜ್ಯದ ಹಿತದೃಷ್ಟಿಯಿಂದ ಸಹಭಾಗಿತ್ವ ಮತ್ತು ಹೂಡಿಕೆ ಎರಡೂ ಏರುತ್ತಾ ಹೋಗಬೇಕಾದರೆ ಕೌಶಲ್ಯ ಪೂರೈಕೆ, ಕೈಗಾರಿಕಾ ರಂಗ ಮತ್ತು ಶಿಕ್ಷಣ ಕ್ಷೇತ್ರಗಳ ನಡುವೆ ಸಮನ್ವಯ, ಗುಣಮಟ್ಟದ ಕಲಿಕೆ ಎಲ್ಲವೂ ಇರುವಂತೆ ನೋಡಿಕೊಳ್ಳಲು ರಾಜ್ಯ ಸರಕಾರವು ಬದ್ಧವಾಗಿದೆ ಎಂಬ ಭರವಸೆ ಪುನರುಚ್ಚರಿಸಿದ್ದಾರೆ.

ಇಂತಹ ದೂರದೃಷ್ಟಿ ಇಟ್ಟುಕೊಂಡೇ ಕರ್ನಾಟಕವು ಹಲವು ಉಪಯುಕ್ತ ನೀತಿಗಳನ್ನು ರೂಪಿಸಿದೆ ಎನ್ನುವುದನ್ನು ಕಾನ್ಸುಲ್ ಜನರಲ್ ಅವರ ಗಮನಕ್ಕೆ ತರಲಾಗಿದೆ ಎಂದು ಪಾಟೀಲ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಇಲಾಖೆ ಉನ್ನತಾಧಿಕಾರಿಗಳಾದ ಎಸ್.ಸೆಲ್ವಕುಮಾರ್, ಏಕರೂಪ್ ಕೌರ್ ಮತ್ತು ಗುಂಜನ್ ಕೃಷ್ಣ ಇದ್ದರು.