ಕೋಲ್ಕತ: ಅಡ್ಡಾದಿಡ್ಡಿ ಗುಂಡು ಹಾರಿಸಿದ ಪೊಲೀಸ್ ಮಹಿಳೆಯೊಬ್ಬಳ ಸಾವಿಗೂ ಕಾರಣನಾಗಿದ್ದಲ್ಲದೆ ಕೊನೆಗೂ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಶ್ಚಿಮ ಬಂಗಾಳದಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ಕೋಲ್ಕತದ ಪಾರ್ಕ್ ಸರ್ಕಸ್ ಕ್ರಾಸಿಂಗ್ ಬಳಿ ಹಾಡಹಗಲೇ ಈ ಗುಂಡಿನ ದಾಳಿ ನಡೆದಿದೆ. ಬಾಂಗ್ಲಾ ದೇಶ ಡೆಪ್ಯುಟಿ ಹೈ ಕಮಿಷನ್ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಈ ಪೊಲೀಸ್, ಕಚೇರಿಯಿಂದ ಸುಮಾರು 50 ಮೀಟರ್ ದೂರದಲ್ಲಿ ಗುಂಡಿನ ದಾಳಿ ನಡೆಸಿದ್ದಾನೆ.
ತನ್ನ ಸರ್ವಿಸ್ ರೈಫಲ್ನಿಂದ ಈತ ಗುಂಡು ಹಾರಿಸಲಾರಂಭಿಸಿದ್ದು, ಆ ಪೈಕಿ ಒಂದು ಗುಂಡು ದ್ವಿಚಕ್ರವಾಹನದಲ್ಲಿ ಹಿಂದೆ ಕುಳಿತುಕೊಂಡು ಹೋಗುತ್ತಿದ್ದ ಮಹಿಳೆಗೂ ತಗುಲಿದ್ದು, ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಬೈಕ್ ಚಲಾಯಿಸುತ್ತಿದ್ದವ ಕೂಡ ಗಾಯಗೊಂಡಿದ್ದು, ಆತ ತಪ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾನೆ. ಬಳಿಕ ಪೊಲೀಸ್ ಅದೇ ರೈಫಲ್ನಿಂದ ತನಗೂ ಗುಂಡು ಹಾರಿಸಿಕೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಐದು ನಿಮಿಷಗಳಲ್ಲಿ ಇವೆಲ್ಲವೂ ನಡೆದುಹೋಗಿದ್ದು, ಸುಮಾರು 9 ಸುತ್ತು ಗುಂಡುಗಳನ್ನು ಹಾರಿಸಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈತ ಇಲ್ಲಿಗೆ ಇಂದಷ್ಟೇ ಇಲ್ಲಿಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರಿಂದ ಯಾರಿಗೂ ಈತನ ಪರಿಚಯ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಂಬಂದಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.