ನ್ಯೂಸ್

ಗಲಾಟೆ ಬಿಡಿಸಲು ಹೋದ ಪೊಲೀಸ್ ಮೇಲೆ ಹಲ್ಲೆ

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಂಬಂಧಿಗಳು ಪರಸ್ಪರ ಹೊಡೆದಾಡಿಕೊಳ್ಳುವಾಗ ಮಧ್ಯ ಪ್ರವೇಶಿ ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿಗೆ ಮಾರಕಾಸದಿಂದ ಹಲ್ಲೆ ನಡೆಸಲಾಗಿದೆ.

ಚಾಮರಾಜಪೇಟೆ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೇಬಲ್ ಸಂತೋಷ್ ಹಾಗೂ ಕೆಂಗೇರಿ ಅಂಚೆಪಾಳ್ಯ ನಿವಾಸಿ ಮೊಹಮ್ಮದ್ ಶಫೀವುಲ್ಲಾ ಗಾಯಗೊಂಡಿದ್ದಾರೆ. ಈ ಸಂಬಂಧ ವಾಲ್ಮೀಕಿನಗರ ನಿವಾಸಿ ತಬರೇಜ್ ಅಲಿಯಾಸ್ ಚೋರ್ ತಬರೇಜ್, ಆತನ ಸಹಚರರಾದ ಅಬ್ರೇಜ್, ಸಲ್ಮಾನ್ ಪಾಷಾನನ್ನು ಬಂಧಿಸಿದ್ದು, ಒಬ್ಬ ಅಪ್ರಾಪ್ತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜು.೨೬ ರಂದು ರಾತ್ರಿ ೯.೩೦ಕ್ಕೆ ಚಾಮರಾಜಪೇಟೆಯ ವಾಲ್ಮೀಕಿನಗರದಲ್ಲಿ ಈ ಘಟನೆ ನಡೆದಿದ್ದು, ಹೆಡ್‌ಕಾನ್‌ಸ್ಟೇಬಲ್ ಸಂತೋಷ್ ಅವರ ಎಡಗೈಗೆ ಗಂಭೀರ ಗಾಯವಾಗಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೊಹಮ್ಮದ್ ಶಫೀವುಲ್ಲಾ ಸಹೋದರಿ ಪುತ್ರಿಯನ್ನು ಆರೋಪಿ ತಬರೇಜ್ ಮದುವೆಯಾಗಿದ್ದ. ಕೌಟುಂಬಿಕ ಕಾರಣಕ್ಕೆ ವಿಚ್ಛೇಧನ ನೀಡಿದ್ದಾನೆ. ಹೀಗಾಗಿ ಆಕೆಯನ್ನು ಶಫೀವುಲ್ಲಾ ಬೇರೊಬ್ಬ ಯುವಕನ ಜತೆ ಮದುವೆ ಮಾಡಿಸಿದ್ದ. ಈ ಕಾರಣಕ್ಕೆ ಕೋಪಗೊಂಡ ಆರೋಪಿ ತನ್ನ ಸಹಚರರ ಜತೆ ಶನಿವಾರ ರಾತ್ರಿ ವಾಲ್ಮೀಕಿನಗರಕ್ಕೆ ಬಂದಿದ್ದ ಮೊಹಮ್ಮದ್ ಶಫೀವುಲ್ಲಾನನ್ನು ಅಡ್ಡಗಟ್ಟಿದ ಆರೋಪಿಗಳು ಜಗಳ ಮಾಡಿ, ಡ್ರಾೃಗರ್‌ನಿಂದ ಹಲ್ಲೆ ನಡೆಸುತ್ತಿದ್ದರು. ಅದೇ ವೇಳೆ ಕರ್ತವ್ಯದಲ್ಲಿದ್ದ ಹೆಡ್‌ಕಾನ್‌ಸ್ಟೇಬಲ್ ಸಂತೋಷ್ ಗಲಾಟೆ ನಿಲ್ಲಿಸಲು ಸ್ಥಳಕ್ಕೆ ಹೋಗಿದ್ದಾರೆ. ಆಗ ಆರೋಪಿಗಳು ಡ್ರಾೃಗರ್‌ನಿಂದ ಸಂತೋಷ್ ಮೇಲೆ ದಾಳಿ ನಡೆಸಿದ್ದಾರೆ. ಪರಿಣಾಮ ಸಂತೋಷ್‌ನ ಎಡಗೈ ಗಾಯವಾಗಿದೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ನಂತರ ಸ್ಥಳೀಯರು ಗಾಯಗೊಂಡಿದ್ದ ಸಂತೋಷ್ ಮತ್ತು ಮೊಹಮ್ಮದ್ ಶಫೀವುಲ್ಲಾನನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಇಬ್ಬರು ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ ನಂತರ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಕೂಡಲೇ ಎಫ್‌ಐಆರ್ ದಾಖಲಿಸಿಕೊಂಡು, ಕ್ಷೀಪ್ರ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.