ನವದೆಹಲಿ: ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನವೊಂದು ಟೀ ಅಂಗಡಿಗೆ ಡಿಕ್ಕಿ ಹೊಡೆದ ಪರಿಣಾಮ, ಈ ಘಟನೆಯಲ್ಲಿ 55 ವರ್ಷದ ಚಹಾ ಮಾರಾಟಗಾರ ಸಾವನ್ನಪ್ಪಿರುವ ಘಟನೆ ಇಂದು (ಸೆ.18) ಮುಂಜಾನೆ ದೆಹಲಿಯ ರಾಮಕೃಷ್ಣ ಆಶ್ರಮ ಮಾರ್ಗದ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.
ಈ ಅಪಘಾತವು ಆ ಪ್ರದೇಶದಲ್ಲಿ ಭೀತಿಯನ್ನು ಸೃಷ್ಟಿಸಿದ್ದು, ಸುತ್ತಮುತ್ತಲಿನಲ್ಲಿದ್ದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಇನ್ನೂ ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಗಂಗಾರಾಮ್ ತಿವಾರಿ ಎಂದು ಗುರುತಿಸಲಾಗಿದ್ದು, ಅವರು ಆರ್‌ಕೆ ಆಶ್ರಮ ಮೆಟ್ರೋ ನಿಲ್ದಾಣದ ಬಳಿಯ ಪಾದಚಾರಿ ಮಾರ್ಗದಲ್ಲಿ ಚಹಾ ಅಂಗಡಿಯನ್ನು ನಡೆಸುವ ಮೂಲಕ ನಿತ್ಯ ಅದರೊಳಗೆ ಮಲಗುತ್ತಿದ್ದರು ಎನ್ನಲಾಗಿದೆ. ಪೊಲೀಸರ ಪ್ರಕಾರ, ಸುಮಾರು ಬೆಳಗ್ಗೆ 5 ಗಂಟೆಗೆ ನವದೆಹಲಿ ಜಿಲ್ಲಾ ಪಿಸಿಆರ್ ಎರ್ಟಿಗಾ ವ್ಯಾನ್ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಅಪಘಾತ ಸಂಭವಿಸಿದಾಗ ವಾಹನವನ್ನು ಚಾಲನೆ ಮಾಡುತ್ತಿದ್ದ ಕಾನ್‌ಸ್ಟೆಬಲ್ ನಿದ್ರೆಗೆ ಜಾರಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಪಘಾತ ನಡೆದಾಗ ವಾಹನದಲ್ಲಿ ಸಹಾಯಕ ಸಬ್-ಇನ್‌ಸ್ಪೆಕ್ಟರ್ (ಎಎಸ್‌ಐ) ಕೂಡ ಇದ್ದರು ಎಂಬುದಾಗಿ ತಿಳಿದು ಬಂದಿದೆ.
(ಏಜೆನ್ಸೀಸ್)
ವಾಹನ ಚಲಾಯಿಸುತ್ತಿದ್ದ ಕಾನ್‌ಸ್ಟೆಬಲ್ ಅವರನ್ನು ಪಿಸಿಆರ್ ನವದೆಹಲಿ ವೃತ್ತದಲ್ಲಿ ನಿಯೋಜಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಪ್ರಾಥಮಿಕವಾಗಿ ಮೇಲ್ನೋಟಕ್ಕೆ ಕಾನ್‌ಸ್ಟೆಬಲ್ ತಿರುವು ತೆಗೆದುಕೊಳ್ಳುವಾಗ ವಾಹನದ ನಿಯಂತ್ರಣ ಕಳೆದುಕೊಂಡು ಪಾದಚಾರಿ ಮಾರ್ಗಕ್ಕೆ ಹತ್ತಿ ಚಹಾ ಅಂಗಡಿಗೆ ಡಿಕ್ಕಿ ಹೊಡೆದಿದ್ದಾರೆ ಎಂಬುದನ್ನು ಗಮನಿಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.