ನ್ಯೂಸ್

ಮುಂಬೈನಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರನ್ನು ಗಡಿಯಲ್ಲೇ ತಡೆದು ನಿಲ್ಲಿಸಿದ ಪೊಲೀಸ್

ವಿಜಯಪುರ: ದೆಹಲಿಯಲ್ಲಿ ನಡೆದಿದ್ದ ತಬ್ಲಿಘಿ ಜಮಾತ್​ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರಿಂದ ದೇಶದಲ್ಲಿ ಅದೆಷ್ಟರ ಮಟ್ಟಿಗೆ ಕರೊನಾ ಪ್ರಮಾಣ ಹೆಚ್ಚಾಯಿತು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ.

ಇನ್ನೂ ಸಹ ತಬ್ಲಿಘಿ ಸಂಪರ್ಕದ ಅನೇಕ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಹೀಗಿರುವಾಗ ಮುಂಬೈನಲ್ಲಿ ಮುಸ್ಲಿಂ ಧಾರ್ಮಿಕ ಸಭೆಯೊಂದರಲ್ಲಿ ಪಾಲ್ಗೊಂಡು ವಾಪಸ್ ಆದ ಗುಂಪೊಂದು ಕರ್ನಾಟಕ-ಮಹಾರಾಷ್ಟ್ರ ಗಡಿಯಾದ ವಿಜಯಪುರ ಜಿಲ್ಲೆಯ ಧೂಳಖೇಡ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡಲು ಮುಂದಾಗಿತ್ತು.

ಒಟ್ಟು 13 ಜನರಿದ್ದ ಖಾಸಗಿ ಬಸ್​​ನ್ನು ತಡೆದು ನಿಲ್ಲಿಸಿದ ಪೊಲೀಸರು, ಅವರಿಗೆ ಪ್ರವೇಶ ನಿರಾಕರಿಸಿದ್ದಾರೆ. ಇವರೆಲ್ಲರೂ ವಿಜಯಪುರದವರೇ ಆಗಿದ್ದು, 2 ತಿಂಗಳ ಹಿಂದೆ ಮುಂಬೈನ ಮಲಾಡ್​ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು, ವಾಪಸ್​ ಬಂದಿದ್ದೀವಿ ಎಂದು ಮಾಹಿತಿ ನೀಡಿದ್ದಾರೆ. ಇವರು ಮಹಾರಾಷ್ಟ್ರದಿಂದ ಪಾಸ್​ ಪಡೆದೇ ಬಂದಿದ್ದಾರೆ.

13 ಮಂದಿಗೆ ಸ್ಕ್ರೀನಿಂಗ್​ ಟೆಸ್ಟ್ ಮಾಡಿರುವ ಪೊಲೀಸ್ ಅಧಿಕಾರಿಗಳು ಅವರನ್ನು ಒಳಗೆ ಬಿಡುತ್ತಿಲ್ಲ. ಗಡಿಯಲ್ಲೇ ತಡೆದು ನಿಲ್ಲಿಸಿದ್ದು, ಹಿರಿಯ ಅಧಿಕಾರಿಗಳ ಸೂಚನೆಗೆ ಕಾಯುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)