ಬೆಂಗಳೂರು: ಚುನಾವಣಾ ಕಣ ರಂಗೇರುತ್ತಿದ್ದು ಮತದಾರರನ್ನು ಸೆಳೆಯಲು ರಾಜಕಾರಣಿಗಳು ನಾನಾ ಕಸರತ್ತು ಮಾಡುತ್ತಿದ್ದಾರೆ. ಜನರಿಗೆ ನಾನಾ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದು ಇದೀಗ ನಾಲ್ಕು ಬೇರೆ ಬೇರೆ ಪ್ರಕರಣಗಳಲ್ಲಿ ದಾಖಲೆ ಇಲ್ಲದ ಹಣ ಹಾಗೂ ವಸ್ತುಗಳು ಪತ್ತೆಯಾಗಿವೆ.
ಈಶಾನ್ಯ ವಿಭಾಗದ ಯಲಹಂಕ ಪೊಲೀಸರು ಹಯಗ್ರೀವ ಪಬ್ಲಿಕ್ ಶಾಲೆ ಮೇಲೆ ದಾಳಿ ಮಾಡಿದ್ದ ಸಂದರ್ಭದಲ್ಲಿ ದಾಸ್ತಾನು ಮಾಡಿದ್ದ 3.60 ಲಕ್ಷ ಮೌಲ್ಯದ 450 ಹೆಲ್ಮೆಟ್, 1.40 ಲಕ್ಷ ಮೌಲ್ಯದ 35 ಕ್ರಿಕೆಟ್ ಸ್ಪೋರ್ಟ್ಸ್ ಕಿಟ್, 25 ಸಾವಿರ ಬೆಲೆ ಬಾಳುವ ಬ್ಲಾಂಕೆಟ್ ಮುಂತಾದ ದಾಖಲೆ ಇಲ್ಲದೇ ಸಿಕ್ಕ ವಸ್ತು ಹಾಗೂ ಹಣ ವಶಕ್ಕೆ ಪಡೆದಿದ್ದಾರೆ.
ಹೆಗಡೆನಗರದ ಖಾಲಿ ಜಾಗದಲ್ಲಿ ಕಾಂಗ್ರೆಸ್ ಮುಖಂಡ ಸೈಯದ್ ಸಾದಿಕ್
ಫುಡ್ ಕಿಟ್ ವಿತರಣೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಸಂಪಿಗೆಹಳ್ಳಿ ಪೊಲೀಸರು 90 ಸಾವಿರ ಮೌಲ್ಯದ 150 ರೇಷನ್ ಕಿಟ್ ವಶಕ್ಕೆ ಪಡೆದಿದ್ದಾರೆ.
ದೇವನಹಳ್ಳಿ ಪೊಲೀಸರು ಡಸ್ಟರ್ ವಾಹನದಲ್ಲಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಕಡೆಗೆ ಸಾಗಿಸುತ್ತಿದ್ದ 1.42 ಲಕ್ಷ ಹಣ ವಶಕ್ಕೆ ಪಡೆದಿದ್ದು ಅದರ ಜತೆಗೆ ದಾಖಲೆ ಇಲ್ಲದ 6.45 ಲಕ್ಷ ಮೌಲ್ಯ ಬೆಲೆ ಬಾಳುವ ತಂಬಾಕು ಪ್ಯಾಕೆಟ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಅದೆಲ್ಲದರ ನಡುವೆ ಅಕ್ರಮ ಮದ್ಯ ಮಾರಾಟದ ಮೇಲೆ ದಾಳಿ ಮಾಡಿರುವ ಈಶಾನ್ಯ ವಿಭಾಗ ಪೊಲೀಸರು 14 ಸಾವಿರ ಮೌಲ್ಯದ 35.5 ಲೀಟರ್ ಮದ್ಯ ಸೀಜ್ ಮಾಡಿದ್ದು ಐದು ಜನ ಆರೋಪಿಗಳ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.