ನ್ಯೂಸ್

ರಾಜ್ಯದ ಖ್ಯಾತಿಯನ್ನು ಪೊಲೀಸರು ಹೆಚ್ಚಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಅಭಿವೃದ್ಧಿಗೆ ನೇರ ಸಂಬಂಧವಿದೆ. ಆದ್ದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲೇಬೇಕು. ಕರ್ನಾಟಕ ಪೊಲೀಸರ ಬಗ್ಗೆ ದೇಶದಲ್ಲಿ ಒಳ್ಳೆ ಹೆಸರಿದೆ. ಈ ಹೆಸರಿಗೆ ಕಳಂಕ ತರುವ ಕೆಲಸ ಯಾರೂ ಮಾಡಬಾರದು. ಹೆಸರನ್ನು ಎತ್ತರಕ್ಕೇರಿಸುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮೇಳನ ಹಾಗೂ ಇಲಾಖೆ ಪರಿಶೀಲನಾ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ಹೆಚ್ಚು ಬಂಡವಾಳ ಹೂಡಿಕೆಯಾಗುತ್ತದೆ. ಬಂಡವಾಳ ಹೂಡಿಕೆಯಾದರೆ ಉದ್ಯೋಗ ಸೃಜನೆಯಾಗಿ ತಲಾ ಆದಾಯ ಹೆಚ್ಚಾಗುತ್ತದೆ ಎಂದರು.

ಕರ್ತವ್ಯ ಲೋಪವಾದರೆ ಸಹಿಸುವುದಿಲ್ಲ: ಸಾರ್ವಜನಿಕರ ಅಭಿಪ್ರಾಯ ರೂಪಿತವಾಗುವ ಬಗ್ಗೆ ಪೊಲೀಸರು ಗಮನ ಹರಿಸಬೇಕು. ಪೊಲೀಸ್ ವ್ಯವಸ್ಥೆಯಲ್ಲಿ ಜನರ ಆಸ್ತಿಪಾಸ್ತಿ ಪ್ರಾಣ, ಮಾನ ರಕ್ಷಣೆ, ಸುರಕ್ಷಿತ ವ್ಯವಸ್ಥೆ, ನಿರ್ಭಯವಾಗಿ ಬದುಕುವ ವ್ಯವಸ್ಥೆ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ. ಒಳ್ಳೆ ಕೆಲಸ ಮಾಡಿದರೆ ಸರ್ಕಾರ ಶ್ಲಾಘನೆ, ಕರ್ತವ್ಯ ಲೋಪವಾದರೆ ಸಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದರು.

ಪೊಲೀಸ್ ಠಾಣೆಗೆ ಭೇಟಿ ನೀಡಲೇಬೇಕು: ರಿಯಲ್ ಎಸ್ಟೇಟ್ ಮಾಡುವವರೊಂದಿಗೆ ಯಾವ ಕಾರಣಕ್ಕೂ ಶಾಮೀಲಾಗಬಾರದು. ಇವರೇ ಸ್ವತ: ರಿಯಲ್ ಎಸ್ಟೇಟ್ ಮಾಡುವುದು ತಿಳಿದರೆ ಕಠಿಣ ಕ್ರಮ ಜರುಗಿಸಲಾಗುವುದು. ಎಸ್.ಪಿ, ಡಿಸಿಪಿ, ಐಜಿ, ಪೊಲೀಸ್ ಆಯುಕ್ತರು ಪ್ರತಿ ದಿನ ಒಂದು ಪೊಲೀಸ್ ಠಾಣೆಗೆ ಭೇಟಿ ನೀಡಲೇಬೇಕು.

ಸ್ಥಳೀಯ ಜನರನ್ನು ಭೇಟಿ ಮಾಡಿ ಇಲ್ಲಿನ ಸಮಸ್ಯೆಗಳೇನು ಎಂದು ಅರಿಯಬೇಕು. ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಯದೆ ಯಾವ ಅಪರಾಧಗಳು ನಡೆಯಲು ಸಾಧ್ಯವಿಲ್ಲ. ಮಾದಕ ವಸ್ತು, ಕಳ್ಳತನ, ದರೋಡೆ, ಜೂಜು, ಮಟ್ಕಾ ಮುಂತಾದವು ಗೊತ್ತಿಲ್ಲದೆ ನಡೆಯಲು ಸಾಧ್ಯವಿಲ್ಲ. ಕೆಲವೆಡೆ ಪೊಲೀಸರು ಇಂಥವರ ಜೊತೆ ಶಾಮೀಲಾಗುತ್ತಾರೆ. ಅವರು ಮನಸ್ಸು ಮಾಡಿದರೆ ಬಹುತೇಕ ಅಪರಾಧಗಳನ್ನು ತಡೆಯಲು ಸಾಧ್ಯ. ಇವರೆಲ್ಲರೂ ಜಾಗೃತರಾಗಲು ಪೊಲೀಸ್ ಅಧಿಕಾರಿಗಳು ಮೇಲಿಂದ ಮೇಲೆ ಭೇಟಿ ನೀಡಬೇಕು. ಕನಿಷ್ಠ ಒಂದು ತಿಂಗಳಲ್ಲಿ ಮೂರು ಠಾಣೆಗಳಿಗೆ ಭೇಟಿ ನೀಡಿ ಜನಸಂಪರ್ಕ ಮಾಡಿದರೆ ವಿಷಯ ತಿಳಿಯುತ್ತದೆ ಇದನ್ನು ಕಟ್ಟುನಿಟ್ಟಾಗಿ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಪೊಲೀಸರಿಗೆ ದೂರದೃಷ್ಟಿಯಿರಬೇಕು: ಪೊಲೀಸರ ಮಧ್ಯೆ ಸಮನ್ವಯದ ಕೊರತೆಯಿದೆ. ಪೊಲೀಸರಿಗೆ ದೂರದೃಷ್ಟಿ ಇರಬೇಕು. ಒಂದು ಮಾಹಿತಿ ಬಂದರೆ ಅದರ ಬಗ್ಗೆ ಫಾಲೋ ಆಫ್ ಕ್ರಮ ವಹಿಸಬೇಕು. ಹುಬ್ಬಳ್ಳಿಯಲ್ಲಿ ನೇಹಾ ಕೊಲೆಯ ನಂತರ ಆದ ಮತ್ತೊಂದು ಕೊಲೆ ಪ್ರಕರಣದಲ್ಲಿ ಆರೋಪಿ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಸೂರು ನೀಡಿದಾಗಲೇ ಕ್ರಮಕೈಗೊಂಡಿದ್ದಾರೆ ಕೊಲೆ ತಡೆಯಲು ಸಾಧ್ಯವಾಗುತ್ತಿತ್ತು ಎಂದು ಉದಾಹರಣೆಗಳನ್ನು ನೀಡಿ ಸೂಚನೆ ನೀಡಲಾಗಿದೆ. ಪೊಲೀಸರಲ್ಲಿ ಶಿಸ್ತು ಇರಲೇಬೇಕು. ಎಲ್ಲಾ ಪೋಲೀಸರು ಶಿಸ್ತು ಕಾಪಾಡಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದರು.

ಹೊಸರೂಪ ಅಪರಾಧ ತಡೆಗೆ ಹೆಚ್ಚಿನ ತರಬೇತಿ: ಸಮಾಜದಲ್ಲಿ ಬೆಳವಣಿಗೆಯಾದಂತೆ ಹೊಸ ರೂಪದ ಅಪರಾಧಗಳು ಸೃಷ್ಟಿಯಾಗುತ್ತವೆ. ಅವುಗಳನ್ನು ತಡೆಯಲು ತಂತ್ರಜ್ಞಾನ ಸೇರಿದಂತೆ ಹೆಚ್ಚಿನ ತರಬೇತಿ ನೀಡಲು ಸೂಚಿಸಲಾಗಿದೆ. ಮಾದಕವಸ್ತುಗಳ ದಂಧೆ ನಿಯಂತ್ರಣಕ್ಕೆ ಕ್ರಮ: ಮಾದಕವಸ್ತುಗಳ ದಂಧೆ ಮೈಸೂರು, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ ಬೆಳಗಾವಿ ಮುಂತಾದೆಡೆ ಹೆಚ್ಚಾಗುತ್ತಿದೆ. ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಈ ವ್ಯವಹಾರದಲ್ಲಿ ಭಾಗಿಯಾಗಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಪೊಲೀಸರು ಕಾನೂನು ವ್ಯವಸ್ಥೆಯನ್ನು ಸುಧಾರಿಸಬೇಕು: ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಜೀರೋ ಟ್ರಾಫಿಲ್ ವ್ಯವಸ್ಥೆ ಮಾಡಬಾರದು ಎಂದು ಸೂಚಿಸಲಾಗಿದೆ. ಕಾನ್ಸ್ ಟೇಬಲ್ ಗಳ ಜೊತೆಗೆ ಉನ್ನತ ಅಧಿಕಾರಿಗಳು ಕೂಡ ಸಂಚಾರ ನಿಯಂತ್ರಣ ಮಾಡಲು ಸೂಚಿಸಲಾಗಿದೆ. ಪೊಲೀಸರು ಕಾನೂನು ವ್ಯವಸ್ಥೆಯನ್ನು ಸುಧಾರಿಸಬೇಕು ಎಂಬುದು ನಮ್ಮ ಉದ್ದೇಶ. ಇದಕ್ಕೆ ಪೊಲೀಸರು ಸಹಕರಿಸುತ್ತಾರೆ ಎಂಬ ನಂಬಿಕೆ, ವಿಶ್ವಾಸ ಇದೆ. ಪೊಲೀಸರು ಮನಸ್ಸು ಮಾಡಿದರೆ ಅಪರಾಧಗಳನ್ನು ತಡೆಗಟ್ಟುವುದು ಅಸಾಧ್ಯವೇನಲ್ಲ. ಇಂಟೆಲಿಜೆನ್ಸ್ ಬಲಬಡಿಸಲೂ ಕೂಡ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದರು.

ಬಿಎನ್ಎಸ್ ತರಬೇತಿ ನೀಡಲಾಗಿದೆ: ಹೊಸ ಕಾನೂನಿಗೆ ಸಂಬಂಧಿಸಿದಂತೆ 23 ಅಂಶಗಳಿಗೆ ತಿದ್ದುಪಡಿ ತಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಈಗಾಗಲೇ ತರಬೇತಿ ನೀಡಲಾಗಿದೆ. ಕೈಪಿಡಿಯನ್ನು ಪ್ರಕಟಿಸಲಾಗಿದೆ. ಹೊಸ ಕಾಯ್ದೆಯಲ್ಲಿ ಸಿ.ಆರ್.ಪಿ.ಸಿಯಲ್ಲಿ ಬದಲಾವಣೆಯಾಗಿದೆ ಎಂದರು. ಎವಿಡಿಯನ್ಸ್, ಸಿಆರ್​ಪಿಸಿ ಕೇಂದ್ರ ಸರ್ಕಾರದ ಕಾಯ್ದೆಯಾಗಿದ್ದು 1860 ನಲ್ಲಿ ರೂಪಿಸಲಾಗಿದೆ ಎಂದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಶಾಮಿಯಾನ ಹಾಗೂ 144 ಸೆಕ್ಷನ್ ಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಗಲಾಟೆ ಹಾಕಬುಹುದೆಂಬ ಉದ್ದೇಶದಿಂದ ಹಾಕಲಾಗಿದೆ ಎಂದರು.

ಸಿಬಿಐ, ಸಿಐಡಿ ಕೂಡ ತನಿಖಾ ಸಂಸ್ಥೆಗಳೇ: ವಿರೋಧಪಕ್ಷದವರು ಪ್ರಕರಣಗಳನ್ನು ಸಿಬಿಐಗೆ ವಹಿಸಲು ಒತ್ತಾಯಿಸುತ್ತಾರೆ. ಆದರೆ ಅಲ್ಲಿರುವವರೂ ನಮ್ಮ ಪೊಲೀಸರೇ. ಸಿಬಿಐ, ಸಿಐಡಿ ಕೂಡ ತನಿಖಾ ಸಂಸ್ಥೆಗಳೇ ಎಂದರು. ಅವರು ಅಧಿಕಾರದಲ್ಲಿದ್ದಾಗ ಚೋರ್ ಬಚಾವೋ ಸಂಸ್ಥೆ ಎನ್ನುತ್ತಿದ್ದರು. ಕೇಂದ್ರ ಸರ್ಕಾರ ಬೇರೆ ಬೇರೆ ರಾಜ್ಯಗಳಲ್ಲಿನ ಅಪರಾಧಗಳನ್ನು ತನಿಖೆ ಮಾಡಲು ಸ್ಥಾಪಿಸಿರುವ ಸಂಸ್ಥೆ ಸಿಬಿಐ. ರಾಜ್ಯ ಪೋಲೀಸರು ಕೂಡ ತನಿಖೆ ಮಾಡಲು ಸಮರ್ಥರಿದ್ದಾರೆ ಎಂದರು.