ಹುಬ್ಬಳ್ಳಿ: ಮನೆ ದರೋಡೆ ಸೇರಿದಂತೆ ವಿವಿಧ ಪ್ರಕರಣದಲ್ಲಿ ಆರೋಪಿಯಾಗಿದ್ದ ಸೋನು ನಾಯಕ ಎಂಬಾತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಉಪನಗರ ಠಾಣೆಯ ಇನ್ಸ್ಪೆಕ್ಟರ್ ಎಂ.ಎಸ್. ಹೂಗಾರ ಎಂಬುವವರು ಆರೋಪಿಯ ಕಾಲಿಗೆ ನೇರವಾಗಿ ಗುಂಡು ಹಾರಿಸಿದ ಘಟನೆ ಹುಬ್ಬಳಿಯ ಹೊರವಲಯದಲ್ಲಿ ನಡೆದಿದೆ.
ಇದನ್ನೂ ಓದಿ: ಯಾವಾಗಲೂ ಸೀರಿಯಸ್ ಆಗಿರುತ್ತಿದ್ದ ಗಂಭೀರ್ ಈ ಪರಿ ನಗಲು ಕಾರಣ ಯಾರು ಗೊತ್ತಾ? ನಿಜಕ್ಕೂ ಅಚ್ಚರಿಪಡ್ತೀರಾ!
ಹುಬ್ಬಳ್ಳಿಯ ಎಂಟಿಎಸ್ ಕಾಲನಿ ಬಳಿ ಫೈರಿಂಗ್ ನಡೆದಿದ್ದು, ಆರೋಪಿ ಸೋನು ನಾಯಕ ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಆರೋಪಿ ಸೇರಿದಂತೆ ನಾಲ್ವರು ಹುಬ್ಬಳ್ಳಿ ಹೊರ ವಲಯದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಮೈಮೇಲಿನ ಆಭರಣ ದೋಚಿದ್ದರು. ಈ ಪ್ರಕರಣ ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಶುಕ್ರವಾರ ಬೆಳಗಿನ ಜಾವ ಪೊಲೀಸರ ಮೇಲೆಯೇ ಹಲ್ಲೆಗೈದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಆರೋಪಿ ವಿರುದ್ಧ ಇದೀಗ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಈ ಪ್ರಕರಣ ಉಪನಗರ ಠಾಣೆಯಲ್ಲಿ ದಾಖಲಾಗಿದೆ.
ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಫರ್ಹಾನ್ ಕಾಲಿಗೆ ಗುಂಡು ಹಾರಿಸಿರುವ ಘಟನೆ ಬೆನ್ನಲ್ಲೇ ಇದೀಗ ಹುಬ್ಬಳ್ಳಿ ಪೋಲಿಸರು ಮತ್ತೊಂದು ಪ್ರಕರಣದಲ್ಲಿ ನಟೋರಿಯಸ್ ದರೋಡೆಕೋರನ ಮೇಲೆ ಫೈರಿಂಗ್ ಮಾಡಿದ್ದಾರೆ. ಉಪನಗರ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಚನ್ನಮ್ಮ ವೃತ್ತದ ಬಳಿ ಚಿನ್ನದ ಸರ, ಉಂಗುರ, ಫೋನ್ ಹಾಗೂ ಹಣ ದರೋಡೆ ಪ್ರಕರಣ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡು ಆರೋಪಿ ಅರುಣ್ ನಾಯಕ ಎಂಬಾತನನ್ನು ಸದ್ಯ ಬಂಧಿಸಿದ್ದಾರೆ.