ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಹಿಂಸಾಚಾರ ಸಂಬಂಧಿಸಿ ಇದುವರೆಗೆ 11 ದೂರುಗಳು ದಾಖಲಾಗಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕ್ಯಾಂಪಸ್ನಲ್ಲಿ ಜನವರಿ 5ರಂದು ನಡೆದ ಹಿಂಸಾಚಾರದ ಕುರಿತು ವಿವಿಯ ಪ್ರೊಫೆಸರ್ ಒಬ್ಬರು ಒಂದು ದೂರು ದಾಖಲಿಸಿದ್ದರೆ, ಉಳಿದವುಗಳನ್ನು ವಿದ್ಯಾರ್ಥಿಗಳು ದಾಖಲಿಸಿದ್ದಾರೆ. ಎಲ್ಲ ದೂರುಗಳು ಕ್ರೈಂ ಬ್ರಾಂಚ್ಗೆ ವರ್ಗಾವಣೆಗೊಂಡಿದೆ ಎಂದು ದೆಹಲಿಯ ಡಿಸಿಪಿ ದೇವೇಂದರ್ ಆರ್ಯ ತಿಳಿಸಿದ್ದಾರೆ.
ಪರಿಸ್ಥಿತಿಯ ಅವಲೋಕನಕ್ಕಾಗಿ ಪೊಲೀಸರು ಸಿವಿಲ್ ಡ್ರೆಸ್ನಲ್ಲಿ ಕ್ಯಾಂಪಸ್ ಒಳಗೆ ಹಾಗೂ ಸಮವಸ್ತ್ರದಲ್ಲಿರುವ ಪೊಲೀಸರು ಕ್ಯಾಂಪಸ್ ಹೊರಗೂ ಇರಲಿದ್ದಾರೆ. ಕ್ರೈಂ ಬ್ರಾಂಚ್ ಮತ್ತು ಫಾರೆನ್ಸಿಕ್ ಸೈನ್ಸ್ ಲ್ಯಾಬ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.
ಘಟನಾವಳಿಗಳಿಗೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯಗಳಿದ್ದರೆ ಹಂಚಿಕೊಳ್ಳುವಂತೆ ಪೊಲೀಸರು ಈಗಾಗಲೇ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ ಎಂದು ಆರ್ಯ ತಿಳಿಸಿದರು. (ಏಜೆನ್ಸೀಸ್)