Rave Party: ಮಹಾರಾಷ್ಟ್ರದ ಪುಣೆಯ ಅಪಾರ್ಟ್ಮೆಂಟ್ವೊಂದರಲ್ಲಿ ನಡೆದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿ ಡ್ರಗ್ಸ್, ಹುಕ್ಕಾ, ಮದ್ಯವನ್ನು ವಶಪಡಿಸಿಕೊಂಡು, ಇಬ್ಬರು ಮಹಿಳೆಯರು ಸೇರಿ 7 ಜನರನ್ನ ಬಂಧಿಸಿದ್ದಾರೆ.
ಪುಣೆ ನಗರದ ದುಬಾರಿ ಖರಾಡಿ ಪ್ರದೇಶದಲ್ಲಿರುವ ಸ್ಟುಡಿಯೋ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಟಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಅಪರಾಧ ವಿಭಾಗ ದಾಳಿ ನಡೆಸಿದೆ ಎನ್ನಲಾಗಿದೆ.
ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, "ಖರಾಡಿ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ರೇವ್ ಪಾರ್ಟಿ ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ಅದರಂತೆ, ನಮ್ಮ ಅಪರಾಧ ವಿಭಾಗದ ತಂಡ ದಾಳಿ ನಡೆಸಿದೆ. ಈ ವೇಳೆ ಮಾದಕ ವಸ್ತುಗಳು ಪತ್ತೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿದ್ದೇವೆ" ಎಂದು ಹೇಳಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ್ ಖಾಡ್ಸೆ ಅವರ ಅಳಿಯ ಪ್ರಾಂಜಲ್ ಖೇವಾಲ್ಕರ್ ಒಬ್ಬರು ಎಂದು ಹೇಳಲಾಗಿದೆ. ಘಟನೆಯ ನಂತರ ಪೊಲೀಸರು ಹಡಪ್ಸರ್‌ನಲ್ಲಿರುವ ಖೇವಾಲ್ಕರ್ ನಿವಾಸದ ಮೇಲೆ ದಾಳಿ ನಡೆಸಿ, ಹೆಚ್ಚಿನ ತನಿಖೆಗಾಗಿ ಲ್ಯಾಪ್‌ಟಾಪ್ ಮತ್ತು ಹಾರ್ಡ್ ಡಿಸ್ಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್ಸಿಪಿ ನಾಯಕ ಏಕನಾಥ್ ಖಡ್ಸೆ, "ಪೊಲೀಸರ ಕ್ರಮದ ಹಿಂದೆ ರಾಜಕೀಯ ಉದ್ದೇಶ ಇದೆಯೇ ಇಲ್ಲವೋ ಎಂಬುದನ್ನು ತಿಳಿಯಲು ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.