ನ್ಯೂಸ್

ಮನೆ ಬಾಗಿಲಿಗೆ ಬರಲಿದ್ದಾರೆ ಪೊಲೀಸ್ ಸಿಬ್ಬಂದಿ

 ಭಟ್ಕಳ: ಸಾರ್ವಜನಿಕರ ಸಮಸ್ಯೆ, ದೂರು ಆಲಿಸಲು ಪೊಲೀಸ್ ಸಿಬ್ಬಂದಿಯೇ ಮನೆಬಾಗಿಲಿಗೆ ಬರುವ ವಿನೂತನ ಪರಿಕಲ್ಪನೆಯಾದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಲಿ ಗ್ರಾಮ ಪಂಚಾಯಿತಿ ಎದುರು ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಸೋಮವಾರ ಹಸಿರು ನಿಶಾನೆ ತೋರಿಸಿದರು.

ನಿಮ್ಮ ಸಮಸ್ಯೆಗಳನ್ನು ಆಲಿಸಲು ಪೊಲೀಸ್ ಸಿಬ್ಬಂದಿಯೇ ನಿಮ್ಮ ಮನೆಯ ಬಾಗಿಲಿಗೆ ಬರಲಿದ್ದಾರೆ. ಪೊಲೀಸರು ಮನೆ ಬಾಗಿಲಿಗೆ ಬಂದಾಗ ಸಾರ್ವಜನಿಕರು ಸಹಕಾರ ನೀಡಬೇಕು. ನಿಮ್ಮ ಮಾಹಿತಿ, ದಾಖಲಾತಿ ಕೇಳಿದ್ದಲ್ಲಿ ನೀಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ನಿಮಗೆ ಅನಾಹುತಗಳಿಂದ ರಕ್ಷಿಸಬಹುದು. ಯಾವುದೇ ಇಲಾಖೆಯಿಂದ ಸಮಸ್ಯೆ ಇದ್ದರು ಗಮನಕ್ಕೆ ತಂದರೆ ಆ ಇಲಾಖೆಯೊಂದಿಗೆ ರ್ಚಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ ಎ. ಲಿಂಗಾರೆಡ್ಡಿ ಮಾತನಾಡಿ, ರಾತ್ರಿ ಹೊತ್ತಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ನಿಮ್ಮ ಬೆಲೆ ಬಾಳುವ ವಸ್ತುಗಳಾದ ಚಿನ್ನಾಭರಣ ಹಾಗೂ ಹಣವನ್ನು ಮನೆಯಲ್ಲಿ ಇಟ್ಟುಕೊಳ್ಳದೇ ಬ್ಯಾಂಕಿನ ಸೇಫ್ ಲಾಕರ್​ನಲ್ಲಿ ಇಡಬೇಕು. ಮನೆ ಬಿಟ್ಟು ಹೊರಗಡೆ ಹೋಗುವಾಗ ಪಕ್ಕದ ಮನೆಯವರು ಹಾಗೂ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ನಿಮ್ಮ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಗಳು ಹಾಗೂ ವಾಹನಗಳ ಓಡಾಟ ಕಂಡು ಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು. ಪಿಎಸ್​ಐ ರನ್ನೇಗೌಡ್, ಪಿಎಸ್​ಐ ಭರಮಪ್ಪ ಬೆಳಗಲಿ, ಇತರರಿದ್ದರು.