ನ್ಯೂಸ್

ಖಾಸಗಿ ಲ್ಯಾಬ್​ನಲ್ಲಿ ರಿಯಾಯಿತಿ ದರದಲ್ಲಿ ಪರೀಕ್ಷೆಗೆ ಮೊರೆ: ವರದಿ ವಿಳಂಬಕ್ಕೆ ಖಾಕಿ ಆಕ್ರೋಶ

ಬೆಂಗಳೂರು: ಕರೊನಾ ಸೋಂಕು ತಡೆಯುವಲ್ಲಿ ಮಹತ್ವದ ಕಾಣಿಕೆ ನೀಡುತ್ತಿರುವ ಪೊಲೀಸರಿಗೆ ಕೋವಿಡ್-19 ಪರೀಕ್ಷಾ ವರದಿ ಕೈಸೇರುವುದು ವಿಳಂಬವಾಗುತ್ತಿದೆ. ಇದರ ಪರಿಣಾಮ ಠಾಣೆ ಮತ್ತು ಕುಟುಂಬದ ಸದಸ್ಯರಿಗೆ ತೊಂದರೆ ಉಂಟಾಗುತ್ತಿದ್ದು, ಖಾಸಗಿ ಲ್ಯಾಬ್​ಗಳ ಮೊರೆ ಹೋಗುತ್ತಿದ್ದಾರೆ.

ಜು.1ರಂದು ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದರೂ ವರದಿ ಜು.5ರಂದು ಕೈಸೇರಿದೆ. ಈ ವರದಿಯಲ್ಲಿ ಮಲ್ಲೇಶ್ವರ ಠಾಣೆಯ ಇಬ್ಬರಿಗೆ ಪಾಸಿಟಿವ್ ಬಂದಿದೆ. ವರದಿ ಬರುವುದು ಐದಾರು ದಿನ ತಡವಾಗಿದ್ದರಿಂದ ಇಷ್ಟೂ ದಿನ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಠಾಣೆಗೂ ನಿರಂತರವಾಗಿ ಬಂದುಹೋಗಿದ್ದಲ್ಲದೆ ಹೊಯ್ಸಳ ಕರ್ತವ್ಯಕ್ಕೂ ನಿಯೋಜನೆಗೊಂಡಿದ್ದರು. ಸೋಂಕು ಇಟ್ಟುಕೊಂಡೇ ಕರ್ತವ್ಯಕ್ಕೆ ಹಾಜರಾಗಿದ್ದವರಿಂದ ಇನ್ನಷ್ಟು ಮಂದಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ.

ರಾಜಾಜಿನಗರ ಸಂಚಾರ ಠಾಣೆ ಬಂದ್: ರಾಜಾಜಿನಗರ ಸಂಚಾರ ಠಾಣೆಯ 54 ವರ್ಷದ ಮುಖ್ಯಪೇದೆಗೆ ಕರೊನಾ ಸೋಂಕು ತಗುಲಿರುವುದರಿಂದ ಠಾಣೆಯನ್ನು ಮುಚ್ಚಲಾಗಿದೆ. ಈ ಠಾಣೆಯ 30 ಸಿಬ್ಬಂದಿಗೆ ಸದ್ಯಕ್ಕೆ ಹೋಮ್ ಕ್ವಾರಂಟೈನ್​ಗೆ ಕಳುಹಿಸಲಾಗಿದೆ.

ಮಲ್ಲೇಶ್ವರ ಠಾಣೆಯ ಹೊಯ್ಸಳ ವಾಹನ ಕರ್ತವ್ಯದಲ್ಲಿದ್ದ ಪುರುಷ ಮತ್ತು ಮಹಿಳಾ ಸಿಬ್ಬಂದಿಗೆ ಕರೊನಾ ದೃಢವಾಗುತ್ತಿದ್ದಂತೆ ಠಾಣೆ ಸೀಲ್​ಡೌನ್ ಮಾಡಲಾಗಿದೆ. ಜತೆಗೆ ಠಾಣೆ ಕರ್ತವ್ಯವನ್ನು ಎದುರುಗಡೆ ಇರುವ ಶಾಲೆ ಆವರಣಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ. ಸೋಂಕಿತರ ಜತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.

ಬೆಂಗಳೂರು ಪೊಲೀಸ್ ಕಮಿಷನರೇಟ್​ನಲ್ಲಿ ಒಟ್ಟು 210 ಮಂದಿಗೆ ಸೋಂಕು ತಗುಲಿದ್ದು, ಐವರು ಮೃತಪಟ್ಟಿದ್ದಾರೆ. ಸಾವಿರಕ್ಕೂ ಅಧಿಕ ಸಿಬ್ಬಂದಿ ಕ್ವಾರಂಟೈನ್​ನಲ್ಲಿದ್ದು 39 ಠಾಣೆ ಸೀಲ್​ಡೌನ್ ಆಗಿವೆ. 50 ವರ್ಷ ಮೇಲ್ಪಟ್ಟವರು ಕರ್ತವ್ಯಕ್ಕೆ ಹಾಜರಾಗದಂತೆ ನಿರ್ದೇಶನ ನೀಡಲಾಗಿದೆ. ಕರೊನಾ ವರದಿ ಬರಲು ತಡವಾಗುತ್ತಿರುವುದರಿಂದಲೇ ಪೊಲೀಸರಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಎನ್ನುವ ಅಸಮಾಧಾನ ಅಧಿಕಾರಿಗಳಿಂದಲೂ ವ್ಯಕ್ತವಾಗುತ್ತಿದೆ.