ಶಿವಮೊಗ್ಗ: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ವಿಶೇಷ ನಿಗಾ ವಹಿಸಬೇಕು. ಪಾರ್ಟಿಗಳ ಆಯೋಜನೆ ಕುರಿತು ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅನುಮತಿ ಪಡೆದುಕೊಳ್ಳಬೇಕು ಎಂದು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಅವರು ಹೋಮ್‌ಸ್ಟೇ, ಹೋಟೆಲ್ ಮತ್ತು ಲಾಡ್ಜ್‌ಗಳ ಮಾಲೀಕರು ಮತ್ತು ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ನಗರದ ಡಿಎಆರ್ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಎಲ್ಲ ಜಿಲ್ಲೆಯ ಎಲ್ಲ ಹೋಮ್‌ಸ್ಟೇ, ಹೋಟೆಲ್ಸ್ ಹಾಗೂ ಲಾಡ್ಜ್‌ಗಳ ಮಾಲೀಕರು ಮತ್ತು ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿದ ಅವರು, ಹೊಸ ವರ್ಷಕ್ಕೆ ನಾಲ್ಕೈದು ದಿನ ಬಾಕಿ ಇದ್ದು ಸಾರ್ವಜನಿಕರ ಹಿತದೃಷ್ಟಿಯಿಂದ ಸಂಭ್ರಮಾಚರಣೆಗೆ ಪೊಲೀಸ್ ಇಲಾಖೆಯ ಕೆಲವೊಂದು ಷರತ್ತುಗಳನ್ನು ಪಾಲನೆ ಮಾಡಬೇಕು. ಮುಖ್ಯವಾಗಿ ಸ್ಥಳೀಯ ಪೊಲೀಸ್ ಠಾಣೆಗಳ ಅನುಮತಿ ಇಲ್ಲದೆಯೇ ಪಾರ್ಟಿಗಳನ್ನು ಆಯೋಜಿಸುವಂತಿಲ್ಲ ಎಂದರು.
ನಿಮ್ಮ ಸಾಮರ್ಥ್ಯ ಮೀರಿ ಬುಕ್ಕಿಂಗ್ ಮಾಡಿಕೊಳ್ಳಬಾರದು. ಮದ್ಯದ ಅಮಲಿನಲ್ಲಿ ಸಾಕಷ್ಟು ಅಪಘಾತ, ಅನಾಹುತಗಳು ಸಂಭವಿಸುವ ಕಾರಣದಿಂದ ಅಬಕಾರಿ ಇಲಾಖೆ ನಿಯಮನುಸಾರ ಮದ್ಯ ಪೂರೈಕೆ ಮಾಡಬೇಕು. ಯಾವುದೇ ಗಲಾಟೆ, ದೋಂಬಿಗಳಿಗೆ ಅವಕಾಶವಿಲ್ಲದಂತೆ ಹೊಸವರ್ಷವನ್ನು ಬರಮಾಡಿಕೊಳ್ಳಬಹುದು. ಅಂದು ಮಧ್ಯರಾತ್ರಿ 1ರವರೆಗೆ ಸಾರ್ವಜನಿಕವಾಗಿ ಸಂಭ್ರಮಾಚರಣೆಗೆ ಅವಕಾಶ ನೀಡಲಾಗುವುದು. ಅತಿವೇಗದಿಂದ ವಾಹನಗಳ ಚಲನೆ ಮತ್ತು ಕುಡಿದು ವಾಹನ ಓಡಿಸಬಾರದು. ರಾತ್ರಿ 1ರ ನಂತರ ಡ್ರಿಂಕ್ ಆ್ಯಂಡ್ ಡ್ರೈವ್ ಅನ್ನು ಕಡ್ಡಾಯವಾಗಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಾರ್ಟಿಗಳನ್ನು ತಮ್ಮ ಜಾಗದಲ್ಲಿ ಆಯೋಜನೆ ಮಾಡಿಕೊಳ್ಳಬೇಕು. ರಾತ್ರಿ 1ರ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪಾರ್ಟಿಗೆ ಬರುವವರನ್ನು ರಾತ್ರಿ ಆದಷ್ಟು ಅಲ್ಲಿಯೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ ಅಥವಾ ಕುಡಿದು ಮನೆಗೆ ಹೋಗುವವರಿಗೆ ಮನೆವರೆಗೆ ಬಿಟ್ಟು ಬರುವುದಕ್ಕೆ ಚಾಲಕರನ್ನು ನಿಯೋಜಿಸಿಕೊಳ್ಳಬೇಕು. ಅನಾಹುತ ಆದರೆ ನಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುವಂತಿಲ್ಲ ಎಂದು ಹೇಳಿದರು. ಎಎಸ್‌ಪಿಗಳಾದ ಅನಿಲ್‌ಕುಮಾರ್ ಭೂಮರಡ್ಡಿ, ಎ.ಜಿ.ಕಾರಿಯಪ್ಪ ಉಪಸ್ಥಿತರಿದ್ದರು.