ನ್ಯೂಸ್

ರಿಕ್ಕಿ ರೈಗೆ ಪೊಲೀಸ್ ನೋಟಿಸ್

ಬೆಂಗಳೂರು: ಬಿಡದಿ ಮನೆಯ ಸಮೀಪದ ಗುಂಡೇಟು ಪ್ರಕರಣ ಸಂಬಂಧ ಭೂಗತ ಪಾತಕಿಯಾಗಿದ್ದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಮೈಸೂರು ರಸ್ತೆ ಬಿಡದಿಯ ಕರಿಯಪ್ಪನದೊಡ್ಡಿ ಬಳಿಯ ರೈ ಾರ್ಮ್ ಗೇಟ್ ಬಳಿಯ ಬಿಡದಿ- ಮುದವಾಡಿ ರಸ್ತೆಯಲ್ಲಿ ಏ.19ರ ತಡರಾತ್ರಿ 2ರಲ್ಲಿ ಕಾರಿನಲ್ಲಿ ರಿಕ್ಕಿ ಸಾಗುತ್ತಿದ್ದಾಗ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಗಾಯಗೊಂಡಿದ್ದ ರಿಕ್ಕಿ, ಮೂರು ದಿನಗಳ ಹಿಂದೆಯಷ್ಟೇ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಈಗಾಗಲೆ ಈ ಪ್ರಕರಣದಲ್ಲಿ ರೈ ಕುಟುಂಬದ ಗನ್‌ಮ್ಯಾನ್ ಮಾನಪ್ಪ ವಿಠ್ಠಲ್‌ನನ್ನು ಬಂಧಿಸಿರುವ ಪೊಲೀಸರು, ರಿಕ್ಕಿಗೆ 15 ಅಂಶಗಳು ಒಳಗೊಂಡ ನೋಟಿಸ್ ಜಾರಿ ಮಾಡಿ ಈ ಎಲ್ಲ ವಿಷಯ ಸಂಬಂಧ ವಿಚಾರಣೆಗೆ ಬರಬೇಕೆಂದು ಸೂಚಿಸಿದ್ದಾರೆ. ಕಾಲಾವಕಾಶ ಕೋರಿರುವ ರಿಕ್ಕಿಗೆ ಇದೀಗ ಪೊಲೀಸರ ವಿಚಾರಣೆ ಸಂಕಷ್ಟ ಎದುರಾಗಿದೆ.

ಈ ಕೇಸಿನಲ್ಲಿ ಬಂಧನಕ್ಕೆ ಒಳಗಾಗಿರುವ ವಿಠ್ಠಲ್‌ಗೆ ರಿಕ್ಕಿ ರೈಯೇ ಹೇಳಿ ಕೊಟ್ಟು ಗುಂಡು ಹೊಡೆಸಿದ್ದಾರೆ ಎಂಬ ಅನುಮಾನಗಳು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿವೆ. ಇತ್ತ ಕಸ್ಟಡಿಯಲ್ಲಿ ಇರುವ ಗನ್‌ಮ್ಯಾನ್ ವಿಠ್ಠಲ್ ಕೆಲ ಮಾಹಿತಿಯನ್ನು ಬಾಯ್ಬಿಟ್ಟಿದ್ದು, ಶನಿವಾರ ಕಸ್ಟಡಿ ಅವಧಿ ಮುಗಿಯಲಿದೆ. ಅಷ್ಟರಲ್ಲಿ ರಿಕ್ಕಿಯನ್ನು ಕರೆದು ವಿಚಾರಣೆ ನಡೆಸಬೇಕೆಂಬುದು ಪೊಲೀಸರು ಪ್ರಯತ್ನವಾಗಿದೆ. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೇ ರಿಕ್ಕಿ ರೈನ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.