ಸಿದ್ದಾಪುರ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿ ಮಂಜುನಾಥ್ ಇತೀಚೆಗೆ ಸಿದ್ದಾಪುರ ಚರ್ಚ್ ಹಾಲ್ ಸಭಾಂಗಣದಲ್ಲಿ ಆಟೋರಿಕ್ಷಾ ಚಾಲಕರ ಸಭೆ ನಡೆಸಿದರು. 
ನ್ಯೂಸ್

ಅಡ್ಡಾದಿಡ್ಡಿ ಆಟೋ ಚಾಲನೆ ಮಾಡಿದರೆ ಕ್ರಮ

ನಾಗೇಶ ಎಸ್

ಸಿದ್ದಾಪುರ:  ಸಿದ್ದಾಪುರ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿ ಮಂಜುನಾಥ್ ಸಭೆ ಕರೆದು ಅಗತ್ಯ ದಾಖಲಾತಿಗಳಿಲ್ಲದ ಆಟೋರಿಕ್ಷಾ ಚಾಲಕರಿಗೆ ಬಿಸಿ ಮುಟ್ಟಿಸಿದರು. 15 ದಿನಗಳೊಳಗೆ ಅಗತ್ಯ ದಾಖಲಾತಿಗಳನ್ನು ಹೊಂದುವಂತೆ ತಾಕೀತು ಮಾಡಿದರು.

ಸಿದ್ದಾಪುರ ಚರ್ಚ್ ಹಾಲ್ ಸಭಾಂಗಣದಲ್ಲಿ ಇತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಮವಸ್ತ್ರ ಧರಿಸದೆ ಪಟ್ಟಣದಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುತ್ತಾರೆ. ಇದರಿಂದ ಟ್ರಾಫಿಕ್ ಸಮಸ್ಯೆಯ ಆರೋಪಗಳು ಕೇಳಿಬಂದಿವೆ. ಆಟೋ ಚಾಲಕರು ತಮ್ಮ ನಿಲ್ದಾಣಗಳಿಂದಲೇ ಪ್ರಯಾಣಿಕರನ್ನು ಕರೆದೊಯ್ಯಬೇಕು. ಅಡ್ಡಾದಿಡ್ಡಿ ಓಡಾಡುವುದು ಕಂಡುಬಂದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ವೈಟ್ ಬೋರ್ಡ್ ಹೊಂದಿರುವ ವಾಹನಗಳನ್ನು ಟ್ಯಾಕ್ಸಿಯಾಗಿ ಬಳಸಲಾಗುತ್ತಿದೆ. ಇದರಿಂದಾಗಿ ತೆರಿಗೆ ಕಟ್ಟಿರುವ ಹಳದಿ ಬೋರ್ಡ್ ವಾಹನಗಳಿಗೆ ಬಾಡಿಗೆ ದೊರಕದೆ ಸಂಕಷ್ಟ ಎದುರಿಸುವಂತಾಗಿದೆ ಎಂದು ಚಾಲಕರು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಮಂಜುನಾಥ್, ಬಿಳಿ ಬಣ್ಣದ ಬೋರ್ಡ್ ಹೊಂದಿರುವ ವಾಹನವನ್ನು ಟ್ಯಾಕ್ಸಿಯಾಗಿ ಬಳಸಲು ಅವಕಾಶ ಕೊಡುವುದಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಪಿಎಸ್‌ಐ ಶಿವಣ್ಣ, ಸಿಬ್ಬಂದಿ ಅಜಿತ್, ಕಿರಣ್, ಈರಪ್ಪ, ಪ್ರಸನ್ನ, ಆಟೋ ಚಾಲಕರು ಇದ್ದರು.