ಲಖನೌ: ಕಳ್ಳ, ಕಾಕರಿಂದ ಜನರನನ್ಉ ರಕ್ಷಿಸಬೇಕಾಗಿರುವ ಪೊಲೀಸರು ಲೂಟಿಕೋರರಾದರೆ ಸಾರ್ವಜನಿಕರ ಗತಿಯೇನು ಎಂದು ಅನುಮಾನ ಮೂಡುವುದು ಸಹಜ. ಇದೀಗ ಅದೇ ರೀತಿಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದ್ದು ಪೊಲೀಸ್ ಇಲಾಖೆ ತೀವ್ರ ಮುಜುಗರಕ್ಕೀಡಾಗಿದೆ.
ಘಟನೆಯೂ ಉತ್ತರಪ್ರದೇಶದ ಔರೈಯಾದಲ್ಲಿ ನಡೆದಿದ್ದು ಪೊಲೀಸ್ ಎಸ್ಐ ಹಾಗೂ ಪೇದೆ ವ್ಯಾಪಾರಿ ಒಬ್ಬರಿಂದ ಸುಮಾರು 50 ಕೆಜಿ ಬೆಳ್ಳಿ ಸಾಮಾಗ್ರಿಗಳನ್ನು ಕದ್ದು ಪರಾರಿಯಾಗುವ ಮೂಲಕ ಸುದ್ದಿಯಾಗಿದ್ದಾರೆ.
ಜೂನ್ 6ರಂದು ರಾತ್ರಿ ಭೋಗಾನಿಪುರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಚಿಂತನ್ ಕೌಶಿಕ್ ಹಾಗೂ ಪೇದೆ ರಾಮ್ಶಂಕರ್ ಯಾದವ್ ಔರೈಯಾ ಗಡಿ ಭಾಗದಲ್ಲಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮನೀಶ್ ಸೋನಿ ಎಂಬ ಉದ್ಯಮಿಯ ಕಾರನ್ನು ನಿಲ್ಲಿಸಿದ್ದ ಇಬ್ಬರು ಆರೋಪಿಗಳು ಚೆಕ್ಕಿಂಗ್ ನೆಪದಲ್ಲಿ ಗಾಡಿಯಲ್ಲಿದ್ದ 50ಕೆಜಿ ತೂಕದ ಬೆಳ್ಳಿ ಆಭರಣವನ್ನು ಲಪಟಾಯಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಜೂನ್ 7ರಂದು ಕಾರನ್ನು ಪರಿಶೀಲಿಸಿದಾಗ ಆಭರಣಗಳು ಕಾಣದಿದ್ಧಾಗ ಉದ್ಯಮಿಗೆ ಅನುಮಾನ ಬಂದಿದ್ದು, ಈ ಕುರಿತು ಔರೈಯಾ ಹಾಗೂ ಕಾನ್ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ವಿಷಯ ಕೇಳಿ ತಬ್ಬಿಬ್ಬಾದ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ್ದಾರೆ.
ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಸಬ್ಇನ್ಸ್ಪೆಕ್ಟರ್ನನ್ನು ಬಂಧಿಸಿ ಅವನ ಬಳಿಯಿದ್ದ 50 ಕೆಜಿ ತೂಕದ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿ ರಾಮ್ಶಂಕರ್ ಯಾದವ್ ತಲೆಮಾರಿಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಔರೈಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಾರು ನಿಗಮ್, ಕಾನ್ಪುರ ಎಸ್ಪಿ ಬಿಬಿಜಿಟಿಎಸ್ ಮೂರ್ತಿ ಸಮ್ಮುಖದಲ್ಲಿ ಉದ್ಯಮಿ ಮನೀಶ್ ಸೋನಿ ಅವರಿಗೆ ಬೆಳ್ಳಿ ಆಭರಣಗಳನ್ನು ಹಿಂತಿರುಗಿಸಲಾಗಿದೆ. ಆರೋಪಿ ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ.