ಹಿಮಾಚಲ ಪ್ರದೇಶ: ಇಬ್ಬರು ಪೊಲೀಸರಿಗೆ ಹೊಸ ವರ್ಷದಂದು(New Year) ಪಾರ್ಟಿ ಮಾಡಲು ಡ್ರಿಂಕ್ಸ್ ಮತ್ತು ತಿನ್ನಲು ಇಲ್ಲ ಎಂದು ಹೇಳಿ ನಿರಾಕರಿಸಿದ ಕಾರಣ, ಖಾಸಗಿ ರೆಸಾರ್ಟ್ ವ್ಯವಸ್ಥಾಪಕನನ್ನು ಥಳಿಸಿ ಕೊಂದ ಘಟನೆ ಇಲ್ಲಿನ ಡಾಲ್ಹೌಸಿ ಬಳಿಯ ಬನಿಖೇತ್ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.
ಅನೂಪ್ ಮತ್ತು ಅಮಿತ್ ಎಂಬ ಇಬ್ಬರ ಕಾನ್ಸ್ಟೇಬಲ್ಗಳನ್ನು ವಶಕ್ಕೆ ಪಡೆದಿದ್ದು, ಅಮಾನತು ಮಾಡಲಾಗಿದೆ. ಇವರ ವಿರುದ್ಧ ಕೊಲೆ ಆರೋಪ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಈ ಘಟನೆ ನಡೆದಿದ್ದು, ಈ ಇಬ್ಬರು ಪೇದೆಗಳು ಮದ್ಯ ಸೇವನೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಡೆದ ಘಟನೆ ಏನು?
ಮಂಗಳವಾರ(ಜ.01) ತಡರಾತ್ರಿ ಪೊಲೀಸರು ಮದ್ಯ ಮತ್ತು ಆಹಾರಕ್ಕಾಗಿ ಒತ್ತಾಯಿಸಿ ರೆಸಾರ್ಟ್‌ಗೆ ಬಂದಿದ್ದರು. ತಡವಾಗಿದೆ. ಅಲ್ಲದೆ, ಸಿಬ್ಬಂದಿ ಕೂಡ ಇಲ್ಲ ಎಂದು ರೆಸಾರ್ಟ್ ಸ್ವಾಗತಕಾರ(Reception) ಸಚಿನ್ ಹೇಳಿದ್ದಾನೆ. ಇದೇ ಕಾರಣಕ್ಕೆ ಕುಪಿತಗೊಂಡ ಪೊಲೀಸರು ಸಚಿನ್ಗೆ ಥಳಿಸಿ ಹಲ್ಲೆ ಮಾಡಿದ್ದಾರೆ. ರೆಸಾರ್ಟ್‌ನ ಜನರಲ್ ಮ್ಯಾನೇಜರ್ ರಾಜಿಂದರ್ ಮಧ್ಯ ಬಂದು ಜಗಳ ಬಿಡಿಸಲು ಮುಂದಾಗಿದ್ದಾರೆ. ಅವರ ಮೇಲೂ ಬಲವಾಗಿ ಹಲ್ಲೆ ನಡೆಸಲಾಗಿದೆ. ಇದರಿಂದ ಕೆಳಗೆ ಬಿದ್ದ ರಾಜಿಂದರ್ ಮೇಲೆ ಏಳಲೇ ಇಲ್ಲ. ಬಳಿಕ ಸತ್ತಿದ್ದಾನೆ ಎಂದು ಗೊತ್ತಾದ ಮೇಲೆ ಪೊಲೀಸರು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ರಸ್ತೆ ಅಡ್ಡಗಟ್ಟಿ ರೆಸಾರ್ಟ್ ಸಿಬ್ಬಂದಿ ಮತ್ತು ಸ್ಥಳೀಯರು ಪ್ರತಿಭಟನೆ ನಡೆಸಿ ಅಧಿಕಾರಿಗಳು ವಿರುದ್ಧ ದೂರು ದಾಖಲಿಸಿದ್ದಾರೆ.(ಏಜೆನ್ಸೀಸ್)