ನ್ಯೂಸ್

ಪ್ರೀತಿ ಹೆಸರಲ್ಲಿ ನಂಬಿಕೆ ದ್ರೋಹ: ನಟ ರಾಜ್​ ತರುಣ್​-ಲಾವಣ್ಯ ಕೇಸ್​ನಲ್ಲಿ ಮತ್ತೊಂದು ಹೊಸ ಟ್ವಿಸ್ಟ್​!

ತೆಲಂಗಾಣ: 11 ವರ್ಷಗಳ ಲಿವ್​ಇನ್​ ರಿಲೇಷನ್​ಶಿಪ್​ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ತರುಣ್ ವಿರುದ್ಧ ಪ್ರೇಯಸಿ ಲಾವಣ್ಯ ಆರೋಪ ಹೊರಿಸಿದ್ದಾರೆ. ಇತ್ತೀಚೆಗಷ್ಟೇ ತನ್ನ ವಕೀಲರಿಗೆ ಮಧ್ಯರಾತ್ರಿ ಸಂದೇಶ ಕಳಿಸುವ ಮೂಲಕ ತನಗೆ ಅನ್ಯಾಯವಾಗಿದೆ ಎಂದು ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದ ಲಾವಣ್ಯಳನ್ನು ಪೊಲೀಸರು ಬುದ್ಧಿ ಮಾತು ಹೇಳಿ, ಸಾವಿನ ದವಡೆಯಿಂದ ಪಾರು ಮಾಡಿದ್ದರು. ಸದ್ಯ ಇವರಿಬ್ಬರ ವಿಚಾರ ಇದೀಗ ಟಾಲಿವುಡ್​ ಚಿತ್ರರಂಗದಲ್ಲಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿದ್ದು, ಚಿತ್ರರಂಗದವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಿವಾದಗಳ ನಡುವೆ ಈಗ ಇವರಿಬ್ಬರ ಪ್ರಕರಣಕ್ಕೆ ಮತ್ತೊಂದು ಹೊಸ ಟ್ವಿಸ್ಟ್ ಸಿಕ್ಕಿದೆ.

ಸದ್ಯ ಲಾವಣ್ಯ-ರಾಜ್ ತರುಣ್​ ಕೇಸ್​ನಲ್ಲಿ ದಿನಕ್ಕೊಂದು ಟ್ವಿಸ್ಟ್​ ಎದುರಾಗುತ್ತಿದ್ದು, ಇದೀಗ ನಟ ರಾಜ್​ ಮತ್ತು ಅವನ ಸಹ ನಟಿ ಮಾಳ್ವಿ ಮಲ್ಹೋತ್ರಾ ವಿರುದ್ಧ ದೂರು ದಾಖಲಿಸಿದ್ದ ಲಾವಣ್ಯ, ತನಗೆ ನಟ ರಾಜ್ ತರುಣ್ ದ್ರೋಹ ಮಾಡಿದ್ದಾನೆ. ನಟಿ​ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದಿದ್ದರು. ನನಗೆ ಮೋಸ ಬಗೆದಿರುವ ರಾಜ್​, ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ. ಅವನಿಂದ ಬಹಳ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ಲಾವಣ್ಯ ನರಸಿಂಗಿ ಪೊಲೀಸ್​ ಠಾಣೆಯಲ್ಲಿ ನಟನ ವಿರುದ್ಧ ದೂರು ದಾಖಲಿಸಿ, ಮನವಿ ಮಾಡಿದ್ದರು. ದೂರಿನ ಮೇರೆಗೆ ಇದೀಗ ಪೊಲೀಸರು ನಟ ರಾಜ್ ತರುಣ್​ಗೆ ನೋಟಿಸ್​ ಜಾರಿಗೊಳಿಸಿದ್ದಾರೆ.

ಲಾವಣ್ಯಳ ಆರೋಪಗಳನ್ನು ಆಲಿಸಿದ್ದ ನರಸಿಂಗಿ ಪೊಲೀಸರು, ಇದೀಗ ನಟ ರಾಜ್ ತರುಣ್​ಗೆ ನೋಟಿಸ್​ ಜಾರಿಗೊಳಿಸಿದ್ದು, ವಿಚಾರಣೆಗೆ ಬರುವಂತೆ ಆದೇಶಿಸಿದ್ದಾರೆ. ಅದರಲ್ಲೂ ಪ್ರತ್ಯೇಕವಾಗಿ ಈ ತಿಂಗಳ 18ರೊಳಗೆ ತಮ್ಮ ಮುಂದೆ ಹಾಜರಾಗಬೇಕು ಎಂದು ನೋಟಿಸ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಬಿಎನ್‌ಎಸ್‌ಎಸ್ 45ರ ಅಡಿಯಲ್ಲಿ ನರಸಿಂಗಿ ಪೊಲೀಸ್​ ಅಧಿಕಾರಿಗಳು ರಾಜ್ ತರುಣ್‌ಗೆ ನೋಟಿಸ್ ರವಾನಿಸಿದ್ದು, ರಾಜ್ ತರುಣ್ ಆರೋಪಿ ಎ1, ಮಾಲ್ವಿ ಮಲ್ಹೋತ್ರಾ ಆರೋಪಿ ಎ2 ಮತ್ತು ಮಯಾಂಕ್ ಮಲ್ಹೋತ್ರಾ ಆರೋಪಿ ಎ3 ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಲೆ ಬೆದರಿಕೆಯೊಡ್ಡಿದ್ದ ಮಾಳ್ವಿ ಮಲ್ಹೋತ್ರಾ ಹಾಗೂ ಆಕೆಯ ಸಹೋದರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಲಾವಣ್ಯ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಕ್ರಮದಲ್ಲಿ ಪೊಲೀಸರು ಮೂವರ ಹೆಸರನ್ನು ಪಿಐಆರ್​ನಲ್ಲಿ ಸೇರಿಸಿದ್ದಾರೆ. ಮೂವರ ವಿರುದ್ಧ ಐಪಿಸಿ ಸೆಕ್ಷನ್ 420,493,506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ,(ಏಜೆನ್ಸೀಸ್).