ನ್ಯೂಸ್

ಶಿವಕುಮಾರ್ ರೆಡ್ಡಿಗೆ ನೋಟಿಸ್ ನೀಡಿದ ಪೊಲೀಸರು

ಬೆಂಗಳೂರು: ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ತೆಲಂಗಾಣದ ಕಾಂಗ್ರೆಸ್ ನಾಯಕ ಕುಂಭಂ ಶಿವಕುಮಾರ್ ರೆಡ್ಡಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಶಿವಕುಮಾರ್ ರೆಡ್ಡಿ ಅವರು ಸದ್ಯ ತೆಲಂಗಾಣದ ನಾರಾಯಣಪೇಟ್ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದಾರೆ. ಅವರು 2018ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ನಾರಾಯಣ್ ಪೇಟ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ತನಿಖೆ ಆರಂಭಿಸಿರುವ ಕಬ್ಬನ್‌ಪಾರ್ಕ್ ಪೊಲೀಸರು ತೆಲಂಗಾಣಕ್ಕೆ ತೆರಳಿ ವಿಚಾರಣೆಗೆ ಬರುವಂತೆ ಶಿವಕುಮಾರ್ ರೆಡ್ಡಿಗೆ ನೋಟಿಸ್ ನೀಡಿದ್ದಾರೆ. ಪೊಲೀಸರ ನೋಟಿಸ್ ಸ್ವೀಕರಿಸಿರುವ ಶಿವಕುಮಾರ್ ರೆಡ್ಡಿ, ವಿಚಾರಣೆಗೆ ಹಾಜರಾಗಲು ಒಂದು ವಾರ ಕಾಲಾವಕಾಶ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ವಿವಾಹಿತರಾದ ಶಿವಕುಮಾರ್ ರೆಡ್ಡಿ ಅವರು, ಪಕ್ಷದ ಚುನಾವಣಾ ಪ್ರಚಾರದ ವಿಚಾರವಾಗಿ ಮಾತನಾಡಲು ತಮ್ಮನ್ನು ಬೆಂಗಳೂರು ಮತ್ತು ಹೈದರಾಬಾದ್‌ನ ಹೋಟೆಲ್ಗೆ ಕರೆಸಿಕೊಂಡಿದ್ದರು. ನಂತರ ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆಗಳನ್ನು ಬೆರೆಸಿ ತಮಗೆ ಕುಡಿಸಿದ್ದರು. ನಂತರ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ತಮ್ಮ ಮೇಲೆ ಶಿವಕುಮಾರ್ ರೆಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ, ತಮ್ಮ ನಗ್ನ ವಿಡಿಯೊ ಚಿತ್ರೀಕರಿಸಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಆರೋಪಿಸಿದ್ದರು. ಸಂತ್ರಸ್ತ ಮಹಿಳೆಯ ದೂರಿನ ಸಂಬಂಧ ಶಿವಕುಮಾರ್ ರೆಡ್ಡಿ ವಿರುದ್ಧ ಹೈದರಾಬಾದ್‌ನ ಪಂಜಗುಟ್ಟ ಠಾಣೆಯಲ್ಲೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ.