| ಕೀರ್ತಿನಾರಾಯಣ ಸಿ. ಬೆಂಗಳೂರು
ಸಾರ್ವಜನಿಕರ ಭದ್ರತೆ ಹಾಗೂ ಅಪರಾಧ ಪ್ರಕರಣಗಳ ನಿಯಂತ್ರಣಕ್ಕಾಗಿ ರೂಪಿಸಿರುವ ಪೊಲೀಸ್ ಗಸ್ತು ವ್ಯವಸ್ಥೆ ಸಂಪೂರ್ಣವಾಗಿ ಸ್ಮಾರ್ಟ್ ಆಗಿದೆ. ಪುಸ್ತಕ ಆಧಾರಿತ ಗಸ್ತು ಪದ್ಧತಿಯನ್ನು ಪೂರ್ಣಪ್ರಮಾಣದಲ್ಲಿ ರದ್ದುಪಡಿಸಿ ‘ಸ್ಮಾರ್ಟ್ ಇ-ಬೀಟ್’ ಪದ್ಧತಿಯನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದೆ. ಇದರೊಂದಿಗೆ ಗಸ್ತು ನಿರ್ವಹಿಸಲು ಪೊಲೀಸರು ತೋರುತ್ತಿದ್ದ ನಿರ್ಲಕ್ಷ್ಯಕ್ಕೆ ಫುಲ್ಸ್ಟಾಪ್ ಬಿದ್ದಿದೆ.
2022ರ ಮೇ ತಿಂಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಕರ್ನಾಟಕ ಪೊಲೀಸ್ ಇಲಾಖೆ ಅಭಿವೃದ್ಧಿಪಡಿಸಿದ್ದ ಸ್ಮಾರ್ಟ್ ಇ-ಬೀಟ್ ವ್ಯವಸ್ಥೆಗೆ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ ನಗರಗಳಲ್ಲಿ ಮಾತ್ರ ರಾತ್ರಿ ಗಸ್ತಿಗೆ ಸ್ಮಾರ್ಟ್ ಇ-ಬೀಟ್ ಜಾರಿಗೊಳಿಸಲಾಗಿತ್ತು. ಈಗ ಗ್ರಾಮೀಣ ಭಾಗಗಳಿಗೂ (ರೂರಲ್ ಬೀಟ್ ಅಥವಾ ಡೇ ಬೀಟ್) ವಿಸ್ತರಿಸಿ ಡಿಜಿಪಿ ಆದೇಶ ಹೊರಡಿಸಿದ್ದಾರೆ. ಹಳ್ಳಿಗಳಲ್ಲಿ ಗಸ್ತು ನಿರ್ವಹಿಸಬೇಕಾದ ಹಗಲು ಬೀಟ್ ಪಾಯಿಂಟ್ಗಳನ್ನು ಸ್ಮಾರ್ಟ್ ಇ-ಬೀಟ್ ತಂತ್ರಾಂಶದಲ್ಲಿ ಅಳವಡಿಸಿ ಹೈಟೆಕ್ ಸ್ಪರ್ಶ ನೀಡಲಾಗಿದೆ. ಇ-ಬೀಟ್ ವ್ಯವಸ್ಥೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಗಸ್ತು ಪಾಳಿ ಕಡ್ಡಾಯ.ಕಾವಲು ಕಾಯದಿದ್ದರೂ ಗಸ್ತು ತಿರುಗಿದ್ದೇವೆ ಎಂದು ಸುಳ್ಳು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಸಹಜವಾಗಿ ಆ ಪ್ರದೇಶದಲ್ಲಿ ಕಳ್ಳತನ, ದರೋಡೆ, ಗಲಾಟೆ, ಗುಂಪು ಘರ್ಷಣೆ, ಕೋಮು ಗಲಭೆ ಇನ್ನಿತರ ಅಪರಾಧ ಪ್ರಕರಣಗಳಿಗೂ ಕಡಿವಾಣ ಬೀಳಲಿದೆ. ಜತೆಗೆ ಪೊಲೀಸರ ಸಂಚಾರದಿಂದ ಹೆಚ್ಚಿನ ಭದ್ರತೆ ಹಾಗೂ ರಕ್ಷಣೆಯ ಭರವಸೆಯನ್ನೂ ಸಾರ್ವಜನಿಕರಲ್ಲಿ ಮೂಡಿಸುತ್ತದೆ.
ನಗರಗಳಲ್ಲಿ ಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರದೇಶ, ಅಪರಾಧ ಪ್ರಕರಣಗಳು ನಡೆಯುವ ಜಾಗ, ವೃದ್ಧರು ಇರುವಂತಹ ಪ್ರದೇಶಗಳಲ್ಲಿ ಪಾಯಿಂಟ್ ಗುರುತಿಸಲಾಗಿರುತ್ತದೆ. ರಾತ್ರಿಪಾಳಿಗೆ ನಿಯೋಜನೆಗೊಂಡಿರುವ ಸಿಬ್ಬಂದಿ ಅಲ್ಲಿಗೆ ತೆರಳಿ ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡಬೇಕು. ಬೆಂಗಳೂರಿನಲ್ಲಿ ಒಂದು ಡಿಸಿಪಿ ವಲಯದಲ್ಲಿ 1,200 ರಿಂದ 1,500 ಪಾಯಿಂಟ್ಗಳಿವೆ. ಗ್ರಾಮೀಣ ಭಾಗದಲ್ಲಿ ಆಯಾ ಠಾಣಾ ವ್ಯಾಪ್ತಿಯ ಐದಾರು ಹಳ್ಳಿಗಳನ್ನು ಸೇರಿಸಿ ಒಂದು ಪಾಯಿಂಟ್ ಎಂದು ಗುರುತಿಸಲಾಗುತ್ತದೆ. ಆ ಎಲ್ಲ ಹಳ್ಳಿಗೂ ಗಸ್ತು ಸಿಬ್ಬಂದಿ ಭೇಟಿ ಕೊಟ್ಟು ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡುವ ಮೂಲಕ ಮಾಹಿತಿ ಅಪ್ಲೋಡ್ ಮಾಡಬೇಕು. ಯಾವ ಹಳ್ಳಿಗೆ ಯಾವ ಸಮಯಕ್ಕೆ ಹೋಗಿದ್ದರು ಎಂಬ ಮಾಹಿತಿಯನ್ನು ಮೇಲಧಿಕಾರಿಗಳು ತಾವಿದ್ದಲ್ಲೇ ಪಡೆಯಬಹುದು. ಗಸ್ತು ತಿರುಗದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಇದರಿಂದ ಅನುಕೂಲವಾಗುತ್ತದೆ.
ಹೇಗಿರುತ್ತೆ ಇ-ಬೀಟ್?: ಕರ್ನಾಟಕ ಪೊಲೀಸ್ ಗಣಕ ವಿಭಾಗ, ಜಿಪಿಅರ್ಎಸ್ ಟ್ರಾ್ಯಕಿಂಗ್ ಹಾಗೂ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದಲ್ಲಿ ಇ-ಬೀಟ್ ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಸ್ಮಾರ್ಟ್ಫೋನ್ನಲ್ಲಿ ಆಪ್ ಡೌನ್ಲೋಡ್ ಮಾಡಿಕೊಂಡು ಬೀಟ್ಗೆ ನಿಯೋಜನೆಗೊಳ್ಳುವ ಪೊಲೀಸ್ ಸಿಬ್ಬಂದಿ ತಮಗೆ ಸೂಚಿಸಿದ ಪಾಯಿಂಟ್ಗೆ ಹೋಗಿ ಅಲ್ಲಿ ಹಾಕಿರುವ ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡಬೇಕು. ಬೀಟ್ ಹಾಕಿದ ಮೇಲಧಿಕಾರಿಗಳಿಗೆ ಪೊಲೀಸ್ ಸಿಬ್ಬಂದಿ ಬೀಟ್ ಜಾಗಕ್ಕೆ ಎಷ್ಟೊತ್ತಿಗೆ ಹೋಗಿದ್ದರು? ಎಷ್ಟು ಸಮಯ ಅಲ್ಲಿದ್ದರು? ಅಲ್ಲಿಂದ ಹೊರಟಿದ್ದು ಯಾವಾಗ ಎಂಬಿತ್ಯಾದಿ ವಿವರಗಳು ರವಾನೆಯಾಗುತ್ತದೆ.
ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಇ-ಬೀಟ್ ವ್ಯವಸ್ಥೆ ಸಹಾಯಕ. ಈವರೆಗೆ ನಗರಗಳಲ್ಲಷ್ಟೇ ರಾತ್ರಿ ಗಸ್ತಿಗೆ ಸ್ಮಾರ್ಟ್ ಇ-ಬೀಟ್ ಪದ್ಧತಿಯಿತ್ತು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಈಗ ಗ್ರಾಮೀಣ ಪ್ರದೇಶದ ಡೇ ಬೀಟ್ಗೂ ವಿಸ್ತರಿಸಲಾಗಿದೆ. ಪುಸ್ತಕ ಆಧಾರಿತ ಹಳೇ ಬೀಟ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಇ-ಬೀಟ್ ಪದ್ಧತಿಯಿಂದ ಪೊಲೀಸರ ಭದ್ರತಾ ಕಾರ್ಯ ಮತ್ತಷ್ಟು ಹೆಚ್ಚಾಗಿ ಅಪರಾಧ ಪ್ರಕರಣಗಳ ನಿಯಂತ್ರಣ ಸಾಧ್ಯವಾಗುತ್ತದೆ. | ಪ್ರವೀಣ್ ಸೂದ್ ಡಿಜಿ-ಐಜಿಪಿ