ಬೆಂಗಳೂರು: ಕರೊನಾ ವೈರಸ್ ಪ್ರಕರಣಗಳು ಅಧಿಕವಾಗಿ ಕಾಣಿಸಿಕೊಂಡಿರುವ ಕಾರಣಕ್ಕೆ ಸೀಲ್ಡೌನ್ ಆಗಿರುವ ಪಾದರಾಯನಪುರ ಸದ್ಯ ಗಲಾಟೆಯ ತಾಣವಾಗಿ ಮಾರ್ಪಟ್ಟಿದೆ.
ಕರೊನಾ ಸೋಂಕಿತರ ಜತೆ ದ್ವಿತೀಯ ಸಂಪರ್ಕ ಹೊಂದಿದ್ದ 58 ಮಂದಿಯನ್ನು ಭಾನುವಾರ ಕ್ವಾರಂಟೈನ್ಗೆ ಒಳಪಡಿಸುವ ಸಂದರ್ಭದಲ್ಲಿ ಆರೋಗ್ಯಾಧಿಕಾರಿಗಳ ಜತೆ ಗಲಾಟೆ ನಡೆಸಿದ್ದಾರೆ. ಬ್ಯಾರಿಕೇಡ್ಗಳನ್ನೆಲ್ಲ ತಳ್ಳಿದ್ದಾರೆ. ಪೊಲೀಸ್ ಚೌಕಿಯನ್ನೂ ಧ್ವಂಸಗೊಳಿಸಿದ್ದಾರೆ.
ಘಟನೆ ಸಂಬಂಧ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನೂ ಪೊಲೀಸರು ಪಡೆದಿದ್ದಾರೆ. ಹಾಗೇ ಜೆಜೆ ನಗರ ಠಾಣೆಯಲ್ಲಿ ಐದು ಪ್ರತ್ಯೇಕ ಎಫ್ಐಆರ್ ದಾಖಲು ಮಾಡಿದ್ದಾರೆ.
ಕರೊನಾ ವಿಚಾರದಲ್ಲಿ ಒಂದು ವರ್ಗದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಮಗೆಲ್ಲ ಶಾಸಕ ಜಮೀರ್ ಸಮ್ಮುಖದಲ್ಲಿ ವೈದ್ಯಕೀಯ ತಪಾಸಣೆ ಮಾಡಬೇಕು ಎಂದು ಗಲಾಟೆ ಮಾಡಿರುವ ಕಿಡಿಗೇಡಿಗಳು ಹಠ ಹಿಡಿಯುತ್ತಿದ್ದಾರೆ ಎನ್ನಲಾಗಿದೆ.
ಗಲಾಟೆಗೆ ಸಂಬಂಧಪಟ್ಟಂತೆ ಒಟ್ಟು 59 ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆ ಮತ್ತು ವೈರಲ್ ಆದ ಗಲಾಟೆಯ ವಿಡಿಯೋದಲ್ಲಿ ಮುಖಚಹರೆಯನ್ನು ಗುರುತಿಸಿ ಪೊಲೀಸರು ರಾತ್ರಿಯಿಡೀ ಪಾದರಾಯನಪುರದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರು ವಶಕ್ಕೆ ಪಡೆದಿರುವ ಶಂಕಿತ ಆರೋಪಿಗಳ ಪೈಕಿ ಓರ್ವ ಯುವತಿ ಕೂಡ ಇದ್ದಾಳೆ ಎನ್ನಲಾಗಿದೆ.
ಘಟನೆಯ ಬಗ್ಗೆ ಹೆಚ್ಚುವರಿ ಆಯುಕ್ತ ಸೌಮೇಂದು ಮುಖರ್ಜಿ ಪ್ರತಿಕ್ರಿಯೆ ನೀಡಿದ್ದು, ಈವರೆಗೆ 59 ಜನರನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಕೆಲವರು ಸಿಕ್ಕಿಲ್ಲ. ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದಿದ್ದಾರೆ.
ಒಟ್ಟು 5 ಪ್ರಕರಣಗಳನ್ನು ದಾಖಲಿಸಲಾಗಿದೆ. ಅದರಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಒಂದು ದೂರು ಕೊಟ್ಟಿದ್ದಾರೆ. ಉಳಿದ ನಾಲ್ಕು ಸುಮೊಟೊ ಆಗಿವೆ.
ಶಂಕಿತ ಕರೊನಾ ಸೋಂಕಿತರನ್ನು ಸ್ಥಳಾಂತರ ಮಾಡುವಾಗ ನಡೆದ ಈ ಗಲಾಟೆ ಪ್ರೀ ಪ್ಲಾನ್ ಆಗಿತ್ತಾ ಅಥವಾ ಆ ಕ್ಷಣಕ್ಕೆ ಏನಾಯಿತು ಎಂಬ ಬಗ್ಗೆ ತನಿಖೆ ನಡೆಸುತ್ತೇವೆ. ಸದ್ಯ ವಶಕ್ಕೆ ಪಡೆದ ಹಲವರು ಕ್ರಿಮಿನಲ್ ಹಿನ್ನೆಲೆ ಹೊಂದಿದವರು ಎಂದು ಹೇಳಿದ್ದಾರೆ.
ಓರ್ವ ಯುವತಿಯನ್ನೂ ವಶಕ್ಕೆ ಪಡೆದಿದ್ದೇವೆ. ಆಕೆ ವಿರುದ್ಧ ಗಾಂಜಾ ಮಾರಾಟ ಆರೋಪವಿದೆ. ಈಕೆಯೇ ಗಲಾಟೆ ಮಾಡಲು ಹುಡುಗರನ್ನು ಕರೆಸಿದಳು. ಸಾಕಷ್ಟು ಜನರನ್ನು ಎತ್ತಿಕಟ್ಟಿದ್ದಾಳೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ವಿಚಾರಣೆ ನಡೆಸುತ್ತೇವೆ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್)