ನ್ಯೂಸ್

ಶಿಕ್ಷಣ ಸಂಸ್ಥೆಯ ಅಧ್ಯಕ್ಷೆಯೇ ಪೊಲೀಸರ ವಶಕ್ಕೆ; ಕೋಟ್ಯಂತರ ರೂ. ವಂಚನೆ, ದಾಖಲೆ ತಿದ್ದಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ

ಕೋಲಾರ: ಕೋಟ್ಯಂತರ ರೂಪಾಯಿ ವಂಚನೆ ಹಾಗೂ ದಾಖಲೆ ತಿದ್ದಿದ ಆರೋಪಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೋಲಾರದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಮಹಿಳಾ ಸಮಾಜ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ನವೀನಾ ಅವರನ್ನು ಕೋಲಾರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಂಚನೆ ಹಾಗೂ ದಾಖಲೆ ತಿದ್ದಿದ ಆರೋಪಕ್ಕೆ ಸಂಬಂಧಿಸಿದಂತೆ ನವೀನಾ ಮತ್ತು ಇತರ ಇಬ್ಬರ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು.

ನಗರಸಭೆಯ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಇವರು ತಮ್ಮ ಶಿಕ್ಷಣ ಸಂಸ್ಥೆಗೆ ಬಾಡಿಗೆ ಪಡೆದಿದ್ದರು. ಬಳಿಕ ನಕಲಿ ದಾಖಲೆ ಸೃಷ್ಟಿಸಿ ಜಮೀನು ಲಪಟಾಯಿಸಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ನವೀನಾ ಮತ್ತಿಬ್ಬರ ಮೇಲೆ ಎಫ್​ಐಆರ್​ ದಾಖಲಾಗಿತ್ತು.

ನಗರಸಭೆ ಮಾಜಿ ಉಪಾಧ್ಯಕ್ಷ ಪ್ರವೀಣ್ ಗೌಡ ನೀಡಿದ ದೂರಿನ ಆಧಾರದ ಮೇಲೆ ಈ ಮೂವರ ಮೇಲೆ ಎಫ್​ಐಆರ್ ದಾಖಲಾಗಿತ್ತು. ಹೀಗಾಗಿ ತಲೆಮರೆಸಿಕೊಂಡಿದ್ದ ನವೀನಾರನ್ನು ಕೋಲಾರ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.