ನ್ಯೂಸ್

ಶಾಂತಿಯುತ ಮತದಾನಕ್ಕೆ ಪೊಲೀಸ್​ ಬಂದೋಬಸ್ತ್​:ಬೆಂ.ನಗರ ಪೊಲೀಸ್​ ಆಯುಕ್ತ ಬಿ.ದಯಾನಂದ್​ ಹೇಳಿಕೆ

ಹರೀಶ್​​ ಕೆ.ಸಿ.

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಎಲ್ಲ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರೆ ಮಾತ್ರ ಉತ್ತಮ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ್​ ಹೇಳಿದ್ದಾರೆ.

ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಭಾನುವಾರ ಕಬ್ಬನ್​ಪಾರ್ಕ್​ ಮುಖ್ಯದ್ವಾರದಲ್ಲಿ ಆಯೋಜಿಸಿದ್ದ "ಮತದಾನ ಜಾಗೃತಿ' ಜಾಥ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರದಲ್ಲಿ ಶಾಂತಿಯುತ ಮತದಾನಕ್ಕೆ ಸೂಕ್ತ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜಧಾನಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿತ್ತು. ಈ ಬಾರಿ ಅಂಥ ತಪ್ಪು ಮರುಕಳಿಸಲು ಮತದಾರರು ಬಿಡಬಾರದು. ಪ್ರಜಾಪ್ರಭುತ್ವ ಹಬ್ಬ ಅಚರಿಸಲಾಗುತ್ತಿದೆ.ಏನೇ ಕಾರಣವಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಆಗಮಿಸಿ ದಾಖಲೆ ಪ್ರಮಾಣದಲ್ಲಿ ಮತದಾನ ಮಾಡಬೇಕು.ಎಲ್ಲರೂ ಒಟ್ಟಾಗಿ ಸೇರಿದರೆ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯ. ನಿಮ್ಮ ಸ್ವವಿವೇಚನೆಯಿಂದ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಿ ಎಂದು ಸಲಹೆ ನೀಡಿದರು.

ಕಬ್ಬನ್​ ಪಾರ್ಕ್​ ಮುಖ್ಯ ದ್ವಾರದಿಂದ ಆರಂಭವಾದ ಮತದಾರ ಜಾಗೃತಿ ಜಾಥ, ಕಸ್ತೂರಬಾ ರಸ್ತೆ, ಕಂಠೀರವ ಒಳಾಂಗಣ ರಸ್ತೆ ಮೂಲಕ ರಾಜ್​ ರಾಮ್​ ಮೋಹನ್​ ರಾಯ್​ ರಸ್ತೆ ಮೂಲಕ ಸಾಗಿ ಬಿಬಿಎಂಪಿ ಸಹಕಾರ ಸಂ ಬಳಿ ಮುಕ್ತಾಯವಾಯಿತು. ಬೆಂಗಳೂರು ಕೇಂದ್ರ ಚುನಾವಣಾಧಿಕಾರಿ ಡಾ.ಕೆ.ಹರೀಶ್​,ಅಪರ ಜಿಲ್ಲಾ ಚುನಾವಣಾಧಿಕಾರಿ ಸ್ನೇಹಾಲ್​, ಸಂಘದ ಅಧ್ಯಕ್ಷ ಎ. ಅಮೃತ್​ರಾಜ್​ ಮತ್ತಿತರರಿದ್ದರು.