ನ್ಯೂಸ್

ರಾಷ್ಟ್ರೀಯ ಹೆದ್ದಾರಿಯಲ್ಲಿ ನಕಲಿ ಪೊಲೀಸ್ ತಪಾಸಣೆ

ಚಿಕ್ಕಬಳ್ಳಾಪುರ; ನಡುರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸ್ ತಪಾಸಣೆ ನೆಪದಲ್ಲಿ ದುಷ್ಕರ್ಮಿಗಳು ತರಕಾರಿ ಸಾಗಾಣೆಯ ಟೆಂಪೋ ವಾಹನ ಚಾಲಕನಿಂದ 80 ಸಾವಿರ ರೂ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ವಂಚನೆಗೊಳಗಾದವರು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಮೇಡಾಪುರಂ ಚಾಲಕ ಪಿ.ರಾಜೇಂದ್ರ ಪ್ರಸಾದ್. ಚಿಕ್ಕಬಳ್ಳಾಪುರ ತಾಲೂಕಿನ ಲಿಂಗಶೆಟ್ಟಿಪುರದಲ್ಲಿ ಇಬ್ಬರು ದುಷ್ಕರ್ಮಿಗಳು ಪೊಲೀಸರು ಎಂಬುದಾಗಿ ಹೇಳಿ ಹಣವನ್ನು ಕಿತ್ತುಕೊಂಡು ಹೋಗಿದ್ದಾರೆ. 

ಇಲ್ಲಿನ ಚಿನ್ನಿಕೃಷ್ಣ ಎಂಬುವರಿಗೆ ಸೇರಿದ ಟೆಂಪೋ ಚಾಲಕನಾಗಿರುವ ರಾಜೇಂದ್ರ ಪ್ರಸಾದ್ ಚಿಕ್ಕಬಳ್ಳಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರಿಂದ ತರಕಾರಿಯನ್ನು ಪಡೆದುಕೊಂಡು ಮಾರುಕಟ್ಟೆಗೆ ಸಾಗಿಸುತ್ತಿದ್ದ. ಇದಕ್ಕೆ ವ್ಯಾಪಾರಿಗಳು ನೀಡಿದ ಹಣವನ್ನು ತಂದು ರೈತರಿಗೆ ನೀಡುತ್ತಿದ್ದ. ಇದರ ನಡುವೆ ಲಿಂಗಶೆಟ್ಟಿಪುರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೋವಿನ ಲೈಟುಗಳು ಕೈ ಕೊಟ್ಟ ಹಿನ್ನೆಲೆಯಲ್ಲಿ ಗಾಡಿ ನಿಲ್ಲಿಸಿ ಮಲಗಿದ್ದಾಗ 30 ರಿಂದ 35 ವರ್ಷ ವಯಸ್ಸಿನ ಇಬ್ಬರು ಬಂದು ಪೊಲೀಸರು ಎಂಬುದಾಗಿ ಪರಿಚಯಿಸಿಕೊಂಡಿದ್ದಾರೆ. ವಾಹನದಿಂದ ಕೆಳಗಿಸಿ, ಡ್ಯಾಶ್ ಬೋರ್ಡ್ ನಲ್ಲಿನ 70 ಸಾವಿರ ರೂ ಮತ್ತು ಚಾಲಕನ ಜೇಬಿನಲ್ಲಿದ್ದ 10 ಸಾವಿರ ರೂ, ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ. ಇದೇ ವೇಳೆ ಕಿರುಚಾಡಲು ಯತ್ನಿಸಿದಾಗ ಬೆದರಿಸಿ ಪರಾರಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇನ್ನು ನಿರಂತರವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳ್ಳತನ, ಸುಲಿಗೆ ಮತ್ತು ವಂಚನೆ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಪಹರೆ ತೀವ್ರಗೊಳಿಸಿ, ಕಳ್ಳರನ್ನು ಬಂಧಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.