ನ್ಯೂಸ್

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸುದ್ದಿವಾಹಿನಿ ಹಾಗೂ ಮುಖ್ಯ ಸಂಪಾದಕರ ವಿರುದ್ಧ ದೂರು ದಾಖಲು

ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆ ಕುರಿತು ಸುಳ್ಳು ಸುದ್ದಿ ಹಬ್ಬಿಸಿ ಅಪಪ್ರಚಾರ ಮಾಡಿರುವ ಬಗ್ಗೆ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಆಜ್ ತಕ್ ರಾಷ್ಟ್ರೀಯ ಸುದ್ದಿವಾಹಿನಿ ಹಾಗೂ ಆ ವಾಹಿನಿಯ ಮುಖ್ಯ ಸಂಪಾದಕ ಸುಧೀರ್ ಚೌದರಿ ಎಂಬುವರ ವಿರುದ್ಧ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಹಾಯಕ ಆಡಳಿತಾಧಿಕಾರಿ ಶಿವಕುಮಾರ್ ದೂರು ದಾಖಲಿಸಿದ್ದಾರೆ.

ನಿರುದ್ಯೋಗಿ ಯುವಕರಿಗೆ ಸ್ವಾವಲಂಬಿ ಬದುಕಿಗೆ ಆಟೋ, ಗೂಡ್ಸ್, ಟ್ಯಾಕ್ಸಿ ಖರೀದಿಗೆ ಶೇ.50ರಷ್ಟು ಅಂದರೆ ಗರಿಷ್ಠ 3 ಲಕ್ಷ ರೂ. ವರೆಗೆ ಸಬ್ಸಿಡಿ ನೀಡುವ ಯೋಜನೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಷ್ಟೇ ಅಲ್ಲದೆ ದೇವರಾಜ ಅರಸು ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮದಲ್ಲೂ ಇದೆ.

ಅಲ್ಪಸಂಖ್ಯಾತ ಸಮುದಾಯ ಅಷ್ಟೇ ಅಲ್ಲದೆ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸೇರಿ ಹಿಂದೂ ಸಮುದಾಯದ ನಿರುದ್ಯೋಗಿ ಯುವಕರಿಗೂ ಇದು ಅನುಷ್ಠಾನದಲ್ಲಿದೆ. ಈ ಯೋಜನೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಜಾರಿ ಮಾಡಿದ್ದಲ್ಲ, ಹಿಂದಿನ ಬಿಜೆಪಿ ಸರ್ಕಾರದಲ್ಲೂ ಜಾರಿಯಲ್ಲಿತ್ತು.

ಆದರೆ ಸುದ್ದಿವಾಹಿನಿಯಲ್ಲಿ ಇದನ್ನು ತಿರುಚಿ ಕೇವಲ ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಅಷ್ಟೇ ಜಾರಿಯಲ್ಲಿದೆ. ಹಿಂದೂಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸುದ್ದಿ ಪ್ರಸಾರ ಮಾಡಿದ್ದು ಇದು ಸುಳ್ಳು ಹಾಗೂ ದುರುದ್ದೇಶಪೂರಿತ ಉದ್ದೇಶದಿಂದ ಕೂಡಿದೆ. ಇದು ಸಮಾಜದಲ್ಲಿ ಕೋಮು ಭಾವನೆ ಕೆರಳುವಂತೆ ಮಾಡುವ ಉದ್ದೇಶ ಹೊಂದಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.