Bangaluru poice  
ನ್ಯೂಸ್

ತೃತೀಯಲಿಂಗಿಗಳ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಪೊಲೀಸ್ ಆಯುಕ್ತರ ಸೂಚನೆ

ಬೆಂಗಳೂರು: ನಗರದ ಸಾರ್ವಜನಿಕ ಸ್ಥಳಗಳಲ್ಲಿ ಕೆಲ ತೃತೀಯಲಿಂಗಿ ವ್ಯಕ್ತಿಗಳಿಂದ ಸಾರ್ವಜನಿಕರಿಗೆ ಕಿರುಕುಳ, ಬಲವಂತವಾಗಿ ಹಣ ವಸೂಲಿ, ಸಂಚಾರಕ್ಕೆ ಅಡ್ಡಿಪಡಿಸುವುದು ಹಾಗೂ ಇತರೆ ಕಾನೂನುಬಾಹಿರ ಚಟುವಟಿಕೆಗಳ ಕುರಿತು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಜನಸಾಮಾನ್ಯರಿಗೆ ಕಿರುಕುಳ ನೀಡುವುದು, ಆಕ್ರಮಣಕಾರಿ ರೀತಿಯಲ್ಲಿ ಹಣ ವಸೂಲಿ ಅಥವಾ ಭಿಕ್ಷೆ ಬೇಡುವುದು, ವಾಹನ ಸಂಚಾರಕ್ಕೆ ಅಡ್ಡಿಪಡಿಸುವುದು, ಬೆದರಿಕೆ, ನಿಂದನಾತ್ಮಕವಾಗಿ ವರ್ತಿಸುವುದು ಹಾಗೂ ಹಲ್ಲೆ ನಡೆಸುವ ಕುರಿತು ದೂರುಗಳು ಬರುತ್ತಿವೆ. ಈ ಕುರಿತು ಸ್ಥಳೀಯ ಪೊಲೀಸರು ತಕ್ಷಣ ಸತ್ಯಾಸತ್ಯತೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಯುಕ್ತರು ಸೂಚಿಸಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾ:

ನಗರದ ಪ್ರಮುಖ ವೃತ್ತ, ಟ್ರಾಫಿಕ್ ಸಿಗ್ನಲ್‌ಗಳು, ಮಾರುಕಟ್ಟೆಗಳು, ಬಸ್ ಹಾಗೂ ರೈಲು ನಿಲ್ದಾಣಗಳು ಮತ್ತು ಸಭೆ ಸಮಾರಂಭಗಳು ನಡೆಯುವ ಸ್ಥಳಗಳು ಸೇರಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ನಿಗಾ ವಹಿಸುವಂತೆ ಸೂಚಿಸಿದ್ದಾರೆ.

ಪದೇ ಪದೇ ದೂರುಗಳು ಬರುತ್ತಿರುವ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಗಸ್ತು ನಿಯೋಜಿಸುವಂತೆ ಠಾಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಸಮುದಾಯದೊಂದಿಗೆ ಸಭೆ:

ತೃತೀಯಲಿಂಗಿ ಸಮುದಾಯದ ಪ್ರತಿನಿಧಿಗಳೊಂದಿಗೆ ಪೊಲೀಸರು ನಿಯಮಿತವಾಗಿ ಸಭೆ ನಡೆಸಬೇಕು. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಅವರಿಗೆ ಕಾನೂನು ಅರಿವು ಹಾಗೂ ಜಾಗೃತಿ ಮೂಡಿಸಬೇಕು. ಇದೇ ವೇಳೆ, ತೃತೀಯಲಿಂಗಿ ವ್ಯಕ್ತಿಗಳಿಂದ ಕಿರುಕುಳ ಅಥವಾ ಕಾನೂನು ಉಲ್ಲಂಘನೆಯಂತಹ ಘಟನೆಗಳು ನಡೆದಾಗ ಸಾರ್ವಜನಿಕರು ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆಯೂ ಅರಿವು ಮೂಡಿಸುವಂತೆ ಸೂಚಿಸಲಾಗಿದೆ.

ಹಕ್ಕುಘನತೆ ರಕ್ಷಣೆಗೆ ಒತ್ತು:

ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಸುಗಮ ಸಂಚಾರ ಖಚಿತಪಡಿಸುವುದರ ಜತೆಗೆೆ ತೃತೀಯಲಿಂಗಿ ವ್ಯಕ್ತಿಗಳ ಕಾನೂನುಬದ್ಧ ಹಕ್ಕುಗಳು, ಗೌರವ ಮತ್ತು ಘನತೆಯನ್ನು ಸಂರಕ್ಷಿಸಬೇಕು. ಪೊಲೀಸ್ ಸಿಬ್ಬಂದಿ ಯಾವುದೇ ತೃತೀಯಲಿಂಗಿ ವ್ಯಕ್ತಿಯೊಂದಿಗೆ ಅವಹೇಳನಕಾರಿ ಅಥವಾ ನಿಂದನಾತ್ಮಕ ಪದಗಳನ್ನು ಬಳಸಬಾರದು. ಗೌರವಯುತ ಹಾಗೂ ತಾರತಮ್ಯರಹಿತ ಭಾಷೆ ಬಳಸಬೇಕು. ಕಾನೂನು ಜಾರಿ ಸಂದರ್ಭದಲ್ಲಿ ಅವರ ಕಾನೂನುಬದ್ಧ ಹಕ್ಕುಗಳು ಮತ್ತು ಘನತೆಗೆ ಧಕ್ಕೆಯಾಗದಂತೆ ಎಚ್ಚರಿಕೆಯಿಂದ ಕ್ರಮವಹಿಸಬೇಕು ಪೊಲೀಸರಿಗೂ ನಿರ್ದೇಶನ ನೀಡಿದ್ದು, ತೊಂದರೆ ಅಥವಾ ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಸಾರ್ವಜನಿಕರು ಆತಂಕಕ್ಕೊಳಗಾಗದೆ ತಕ್ಷಣವೇ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಅಥವಾ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.