ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಈ ವೇಳೆ ಸೈಬರ್ ಕಿಡಿಗೇಡಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮನವಿ ಮಾಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಶತ್ರು ರಾಷ್ಟ್ರವಾದ ಪಾಕಿಸ್ತಾನ ಸೈಬರ್ ವಂಚಕರು ಭಾರತದ ಮೇಲೆ ಸೈಬರ್ ದಾಳಿಗೆ ಮುಂದಾಗಿದ್ದಾರೆ. ಈ ಬಗ್ಗೆ ಎಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಈಗಾಗಲೇ ಸೂಚನೆ ನೀಡಿದೆ.
ಈ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತರೂ ಕೂಡ ಸೈಬರ್ ಕ್ರೈಂ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದ್ದಾರೆ. ಜತೆಗೆ ಭಾರತ-ಪಾಕಿಸ್ತಾನದ ಉದ್ವಿಗ್ನ ಪರಿಸ್ಥಿತಿ ಬಗ್ಗೆ ಜನರಿಗೆ ಇರುವ ಕುತೂಹಲವನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದ್ದು, ನಿಮ್ಮನ್ನು ತೊಂದರೆಗೆ ಸಿಲುಕಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ಬಗ್ಗೆ ಎಚ್ಚರ ವಹಿಸಿ ಎಂದು ಕಿವಿಮಾತು ಹೇಳಿದ್ದಾರೆ.
ಅಪರಿಚಿತ ಲಿಂಕ್, ಸಂದೇಶ, ವಾಟ್ಸ್‌ಆ್ಯಪ್, ಇ-ಮೇಲ್ ಗಳ ಮೇಲೆ ನಿಗಾವಹಿಸಬೇಕಿದ್ದು, ಭಾರತ-ಪಾಕ್ ನಡುವಿನ ಯುದ್ಧ ಕುರಿತು ಕೆಲವೊಂದು ಪ್ರಮುಖ ಸುದ್ದಿಗಳ ವಿಡಿಯೋ ಮತ್ತು ಸಂದೇಶವಿರುವ ಲಿಂಕ್‌ಗಳನ್ನು ಕಳುಹಿಸುತ್ತಾರೆ. ಜತೆಗೆ ಸೇನಾ ನೇಮಕಾತಿ ಅರ್ಜಿಯ ಪಿಡಿಎಫ್, ಟಾಸ್ಕ್‌ಶೇ, ಎಪಿಕೆಎಸ್ ಫೈಲ್, ಅಪರಿಚಿತ ಫಾರ್ವಡ್ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ವಾಟ್ಸ್ ಆ್ಯಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಪರಿಚಿತ ಫೈಲ್‌ಗಳನ್ನು ಓಪನ್ ಮಾಡಬೇಡಿ, ಒಂದು ವೇಳೆ ಓಪನ್ ಅಥವಾ ಅದರ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ವೈಯಕ್ತಿಕ ಮಾಹಿತಿಗಳು ಹಾಗೂ ಇತರೆ ಮಾಹಿತಿಗಳನ್ನು ಸೈಬರ್ ವಂಚಕರು ಕಳವು ಮಾಡಿ ನಿಮ್ಮನ್ನು ತೊಂದರೆಗೆ ಸಿಲುಕಿಸುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಅಪರಿಚಿತ ಫೈಲ್‌ಗಳು, ಇ-ಮೇಲ್‌ಗಳನ್ನು, ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು ಅಥವಾ ಡೌನ್‌ಲೋಡ್ ಮಾಡಬಾರದು. ಅಧಿಕೃತವಾದ ಪ್ಲೆಸ್ಟೋರ್‌ನಲ್ಲಿ ಮಾತ್ರ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ . ಅಪರಿಚಿತ ವಾಟ್ಸ್‌ಗ್ರೂಪ್‌ಗೆ ನೀವು ಆ್ಯಡ್ ಆದರೆ ಕೂಡಲೇ ಎಕ್ಸಿಟ್ ಆಗಿ ರಿಪೋರ್ಟ್ ಮಾಡಿ. ವಾಟ್ಸ್‌ಆ್ಯಪ್ ಸೆಕ್ಯೂರಿಟಿ ಅಪ್‌ಡೇಟ್ ಮಾಡಿಕೊಳ್ಳಿ, ಜತೆಗೆ ಮೊಬೈಲ್‌ನಲ್ಲೂ ಕೆಲವೊಂದು ಸೆಟ್ಟಿಂಗ್‌ಗಳಿಂದ ಅಪ್‌ಡೇಟ್ ಮಾಡಿಕೊಂಡು, ಆ್ಯಂಟಿವೈರಸ್ ಅಪ್‌ಡೇಟ್ ಮಾಡಿಕೊಳ್ಳಿ ಎಂದು ಎಂದು ಮನವಿ ಮಾಡಿದ್ದಾರೆ.