ಮಂಗಳೂರು: ಮಹಾನಗರ ಪಾಲಿಕೆ ದಲಿತ ಕಾಲನಿಗಳ 11 ಕಡೆ ಸಿಸಿ ಕ್ಯಾಮರಾ ಅಳವಡಿಸಲು ಮಂಜೂರಾತಿ ನೀಡಿತ್ತು. ಆದರೆ ಇದುವರೆಗೆ ಕಾರ್ಯಗತಗೊಂಡಿಲ್ಲ ಎಂದು ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ್ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ದಲಿತ ಕುಂದು ಕೊರತೆ ಮಾಸಿಕ ಸಭೆಯಲ್ಲಿ ದಲಿತ ಮುಖಂಡ ಎಸ್‌ಪಿ ಆನಂದ ವಿಷಯ ಪ್ರಸ್ತಾಪಿಸಿದರು.
ದಲಿತರ ಕಾಲನಿಗಳಲ್ಲಿ ಗಾಂಜಾ ಮತ್ತಿತತರ ಅಕ್ರಮ ಚಟುವಟಿಕೆಗಳು ನಡೆದ ಸಂದರ್ಭದಲ್ಲಿ ಸ್ಥಳೀಯ ಅಮಾಯಕ ಯುವಕರ ಮೇಲೆಯೂ ಸಂಶಯ ಬಂದು ಅವರನ್ನು ಪೊಲೀಸರು ವಶಕ್ಕೆ ಪಡೆಯುವ ಘಟನೆಗಳು ನಡೆಯುತ್ತವೆ. ಹಾಗಾಗಿ ಸಿಸಿ ಕೆಮರಾ ಅಳವಡಿಸಿದರೆ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು, ಅಕ್ರಮಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎಂದವರು ಹೇಳಿದರು. ಈ ಬಗ್ಗೆ ಪೂರಕ ದಾಖಲೆ ಒದಗಿಸುವಂತೆ ಡಿಸಿಪಿ ತಿಳಿಸಿದರು. ಪಾಲಿಕೆ ಜತೆ ಸಂಹವನ ನಡೆಸುವುದಾಗಿ ಭರವಸೆ ನೀಡಿದರು.
ಮಾದಕವಸ್ತು ಮಾರಾಟ ಹಾಗೂ ಸೇವನೆ ಮಾಡಿ ಸಿಕ್ಕಿ ಬಿದ್ದವರನ್ನು ವಾರಕ್ಮೊಮ್ಮೆಯಾದರೂ ಠಾಣೆಗೆ ಕರೆಯಿಸಿ ಸಹಿ ಪಡೆದು ಎಚ್ಚರಿಕೆ ನೀಡಬೇಕು. ಆಗ ಅವರು ತಮ್ಮ ಕೃತ್ಯ ಪುನರಾವರ್ತನೆ ಮಾಡುವುದನ್ನು ತಪ್ಪಿಸಲು ಸಾಧ್ಯವಿದೆ ಎಂದು ಸದಾಶಿವ ಉರ್ವಸ್ಟೋರ್ ಸಲಹೆ ನೀಡಿದರು. ಸರ್ಕಾರ ದಲಿತ ಸಮುದಾಯದವರಿಗಾಗಿ ಸಾಲ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಘೋಷಿಸಿದೆ. ಆದರೆ ಅಧಿಕಾರಿಗಳು ಅದನ್ನು ನೀಡಲು ಸತಾಯಿಸುತ್ತಿದ್ದಾರೆ. ಉನ್ನತ ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಾಲ ಕೂಡ ಸಕಾಲದಲ್ಲಿ ನೀಡುತ್ತಿಲ್ಲ ಎಂದು ಚಂದ್ರಕುಮಾರ್, ಜಗದೀಶ್ ಪಾಂಡೇಶ್ವರ ಮೊದಲಾದವರು ದೂರಿದರು. ಇದನ್ನು ಜಿಲ್ಲಾಧಿಕಾರಿಯವರು, ಸಂಬಂಧಿಸಿದ ಬ್ಯಾಂಕ್‌ಗಳ ಗಮನಕ್ಕೆ ತರಲಾಗುವುದು ಎಂದು ಡಿಸಿಪಿ ಪ್ರತಿಕ್ರಿಯಿಸಿದರು.
ಗೃಹರಕ್ಷಕರು ಪೊಲೀಸರೊಂದಿಗೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುತಿದ್ದಾರೆ. ಆದರೆ ಅವರಿಗೆ ಇಎಸ್‌ಐ, ಪಿಎಫ್ ಮೊದಲಾದ ಯಾವುದೇ ಸೌಲಭ್ಯಗಳಿಲ್ಲ. ಅಪಘಾತಗಳುಂಟಾದರೆ ಅಥವಾ ಅಸೌಖ್ಯವಾದರೆ ವೈದ್ಯಕೀಯ ವೆಚ್ಚಕ್ಕೆ ವ್ಯವಸ್ಥೆ ಇಲ್ಲ. ಗೃಹರಕ್ಷಕ ದಳದಲ್ಲಿ ಶೇ.50ಕ್ಕೂ ಅಧಿಕ ಮಂದಿ ದಲಿತರಿದ್ದಾರೆ. ಅವರು ತುಂಬಾ ಬಡವರಾಗಿದ್ದಾರೆ. ಮಹಿಳೆಯರು ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಅವರು ಕರ್ತವ್ಯ ಮುಗಿಸಿ ಮನೆಗೆ ತಲುಪಲು ಪರದಾಡಬೇಕಾಗುತ್ತದೆ ಎಂದು ಸದಾಶಿವ ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ಬಿ.ಪಿ. ದಿನೇಶ್ ಕುಮಾರ್ ಅವರು, ಗೃಹರಕ್ಷಕ ದಳದ ಸಿಬಂದಿಯನ್ನು ಕೂಡ ಪೊಲೀಸ್ ಸಿಬಂದಿಯಂತೆಯೇ ನೋಡಿಕೊಳ್ಳಲಾಗುತ್ತಿದೆ. ಕರ್ತವ್ಯ ಮುಗಿದ ಅನಂತರ ಮನೆಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಈ ಬಗ್ಗೆ ನಿರ್ದಿಷ್ಟ ದೂರುಗಳಿದ್ದರೆ ಗಮನಕ್ಕೆ ತರಬಹುದು. ಡಿಸಿಪಿ ಸಿದ್ಧಾರ್ಥ್ ಅವರು ಮಾತನಾಡಿ, ಗೃಹರಕ್ಷಕ ದಳದವರ ಸೇವೆ ಖಾಯಂ ಅಲ್ಲ. ಹಾಗಾಗಿ ಅವರಿಗೆ ಸರ್ಕಾರದ ಇತರ ಸೌಲಭ್ಯಗಳು ದೊರೆಯುತ್ತಿಲ್ಲ. ಈ ಬಗ್ಗೆ ಹೋಂಗಾರ್ಡ್ ಕಮಾಂಡೆಂಟ್ ಅವರ ಮೂಲಕ ಪ್ರಸ್ತಾವನೆ ಬಂದರೆ ಅದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಗೃಹರಕ್ಷಕರಿಗೆ ನೀಡಲು ಸಾಧ್ಯವಿರುವ ಎಲ್ಲ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಎಸಿಪಿಗಳಾದ ಮಹೇಶ್ ಕುಮಾರ್, ಗೀತಾ ಕುಲಕರ್ಣಿ, ಧನ್ಯಾ ಎನ್.ನಾಯಕ್ ಉಪಸ್ಥಿತರಿದ್ದರು. ಇನ್ಸ್‌ಪೆಕ್ಟರ್ ಭಾರತಿ ಕಳೆದ ಸಭೆಯ ನಡಾವಳಿ ಮಂಡಿಸಿದರು.