ನ್ಯೂಸ್

ಬಾಡಿಗೆ ತಾಯ್ತನ ದಂಧೆ ಜಾಲ ಬೇಧಿಸಿದ ಪೊಲೀಸರು; 8 ಆರೋಪಿಗಳ ಬಂಧನ; ಬಾಡಿಗೆ ತಾಯ್ತನ ಅಂದ್ರೆ ಏನು?| Surrogacy

Surrogacy : ಕಾನೂನು ಬಾಹಿರವಾಗಿ ಬಾಡಿಗೆ ತಾಯ್ತನ(ಸರೋಗಸಿ) ದಂಧೆಯಲ್ಲಿ ತೊಡಗಿದ್ದ ಜಾಲವನ್ನು ಬೇಧಿಸಿರುವ ತೆಲಂಗಾಣ ಪೊಲೀಸರು, ಹೈದರಾಬಾದ್​ನಲ್ಲಿ ಓರ್ವ ಪುರುಷ, 7 ಮಹಿಳೆಯರು ಸೇರಿ 8 ಜನರನ್ನು ಬಂಧಿಸಿದ್ದಾರೆ ಎಂದು ಶುಕ್ರವಾರ (ಆಗಸ್ಟ್ 15) ವರದಿಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮೇಡ್ಚಲ ಡಿಸಿಪಿ ಕೋಟಿ ರೆಡ್ಡಿ, "ಅಕ್ರಮ ಮತ್ತು ಕಾನೂನು ಬಾಹಿರವಾಗಿ ಬಾಡಿಗೆ ತಾಯ್ತನ ದಂಧೆಯಲ್ಲಿ ತೊಡಗಿದ್ದ 8 ಜನರನ್ನು ಬಂಧಿಸಲಾಗಿದೆ. ಮಕ್ಕಳಿಲ್ಲದ ದಂಪತಿಗಳನ್ನು ಗುರಿಯಾಗಿಸಿಕೊಂಡು ಆರೋಪಿಗಳು 15-20 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಲಕ್ಷ್ಮೀ ರೆಡ್ಡಿ ಎಂಬಾಕೆ ಈ ಹಿಂದೆ ಬಾಡಿಗೆ ತಾಯ್ತನದ ಕೆಲಸ ಮಾಡಿದ ಅನುಭವ ಹೊಂದಿದ್ದಾಳೆ. ಅದರ ಅನುಭವವನ್ನು ಬಳಸಿಕೊಂಡು ಸುಲಭವಾಗಿ ಹಣ ಸಂಪಾದಿಸಲು ಕಾನೂನು ಬಾಹಿರವಾಗಿ ದಂಧೆಯಲ್ಲಿ ತೊಡಗಿ ಏಜೆಂಟ್​ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಲಕ್ಷ್ಮಿರೆಡ್ಡಿ ಮಗ ಎ2 ನರೇಂದರ್ ರೆಡ್ಡಿ JNTUನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಓದಿದ್ದಾನೆ. ಅದ್ಯಾಗ್ಯೂ ತಾಯಿಗೆ ಸಹಾಯ ಮಾಡಲು ಈ ದಂಧೆಯಲ್ಲಿ ತೊಡಗಿದ್ದಾನೆ. ಹಣದ ಅವಶ್ಯಕತೆಯಿರುವ ಬಡ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರನ್ನು ಬಾಡಿಗೆ ತಾಯಿ ಆಗಲು ಒಪ್ಪಿಸುತ್ತಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.

ಬಂಧಿತರಾದ ಆರೋಪಿಗಳಿಂದ 6.47 ಲಕ್ಷ ನಗದು, ಲೆನೊವೊ ಲ್ಯಾಪ್‌ಟಾಪ್, ಪ್ರಾಮಿಸರಿ ನೋಟ್‌ಗಳು, ಬಾಂಡ್ ಪೇಪರ್‌ಗಳು, ಸಿರಿಂಜ್‌ಗಳು, ಗರ್ಭಧಾರಣೆಯ ಔಷಧಿಗಳು, ಹಾರ್ಮೋನ್ ಇಂಜೆಕ್ಷನ್‌ಗಳು, ಹೆಗ್ಡೆ ಆಸ್ಪತ್ರೆಯ ಕೇಸ್ ಶೀಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರೂ ಕೆಲವು ಆಸ್ಪತ್ರೆಗಳಿಗೆ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಸರೋಗಸಿ ರೆಗ್ಯುಲೇಷನ್ ಆಕ್ಟ್, ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ ಆಕ್ಟ್, ಹಾಗೂ BNS ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಾಡಿಗೆ ತಾಯ್ತನ(ಸರೋಗಸಿ) ಎಂದರೇನು?

ಬಾಡಿಗೆ ತಾಯ್ತನ ಎನ್ನುವುದು ಸಂತಾನೋತ್ಪತ್ತಿಯ ಪದ್ದತಿಯಾಗಿದೆ. ಒಬ್ಬ ಮಹಿಳೆ ಪತಿಯಲ್ಲದ ಇನ್ನೊಬ್ಬ ವ್ಯಕ್ತಿ ಅಥವಾ ದಂಪತಿಗಳಿಗಾಗಿ ಅವರ ಮಗುವನ್ನು 9 ತಿಂಗಳು ಹೊತ್ತು ಜನ್ಮ ನೀಡುವುದು. ಅವರೇ ಕಾನೂನು ಬದ್ಧ ಪೋಷಕರಾಗಿರುತ್ತಾರೆ. ಗರ್ಭಧರಿಸಲು ಅಥವಾ ಗರ್ಭಧಾರಣೆ ಹೊಂದಲು ಸಾಧ್ಯವಾಗದ ಮಹಿಳೆ ಅಥವಾ ದಂಪತಿಗಳು ಮಗು ಪಡೆಯಲು ಇದೊಂದು ಆಯ್ಕೆಯಾಗಿದೆ.

ದೇಶದಿಂದ ದೇಶಕ್ಕೆ ಈ ಪದ್ದತಿ ಬಗ್ಗೆ ಭಿನ್ನ ಕಾನೂನುಗಳಿವೆ. ವ್ಯಾಪಾರದ ಉದ್ದೇಶ ಬಳಕೆಗೆ ಕೆಲವು ದೇಶಗಳು ನಿಷೇಧಿಸಿವೆ. ಇನ್ನು ಕೆಲವು ದೇಶಗಳು ಸ್ವಾಗತಿಸಿವೆ. ಭಾರತದಲ್ಲಿ 2021ರ ಸರೋಗಸಿ ನಿಯಂತ್ರಣ ಕಾಯ್ದೆ ಜಾರಿಯಲ್ಲಿದೆ. ವ್ಯಾಪಾರ ಉದ್ದೇಶದ ಬಳಕೆಗೆ ಈ ಪದ್ದತಿಯನ್ನು ನಮ್ಮ ದೇಶದಲ್ಲಿ ನಿಷೇಧಿಸಲಾಗಿದೆ.

ನಿರ್ಧಿಷ್ಟ ಅರ್ಹತಾ ಮಾನದಂಡದ ಆಧಾರದಲ್ಲಿ ಕಾನೂನು ಬದ್ಧವಾಗಿ ವಿವಾಹಿತ, ಭಿನ್ನಲಿಂಗೀಯ ದಂಪತಿಗಳಿಗೆ ಮಾತ್ರ ಈ ಬಾಡಿಗೆ ತಾಯ್ತನಕ್ಕೆ ಅವಕಾಶ ನೀಡುತ್ತದೆ. ಈ ಮಾನದಂಡಗಳಲ್ಲಿ ದಂಪತಿಗಳು ಕನಿಷ್ಠ ಐದು ವರ್ಷಗಳ ಕಾಲ ಮದುವೆಯಾಗಿರಬೇಕು. ವೈದ್ಯಕೀಯವಾಗಿ ಸದೃಢರಾಗಿರಬೇಕು ಮತ್ತು ಯಾವುದೇ ಜೈವಿಕ ಅಥವಾ ದತ್ತು ಪಡೆದ ಮಕ್ಕಳನ್ನು ಹೊಂದಿರಬಾರದು. ಆದಾಗ್ಯೂ ಬಾಡಿಗೆ ತಾಯಿಯು ಉದ್ದೇಶಿತ ದಂಪತಿಗಳ ಹತ್ತಿರದ ಸಂಬಂಧಿಯಾಗಿರಬೇಕು ಎಂದು ಕಾನೂನು ಹೇಳುತ್ತದೆ. (ಏಜೆನ್ಸೀಸ್)