ಬೆಂಗಳೂರು:
ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಪೊಲೀಸ್ ಅಧಿಕಾರಿಗಳು ಇದೇ ರೀತಿ ನಡೆದುಕೊಂಡರೆ ನಾನೂ ಸೇರಿ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ವಿನಾಕಾರಣ ಎ್ಐಆರ್ ದಾಖಲಿಸುತ್ತಿದ್ದಾರೆ. ಆಡಳಿತ ಪಕ್ಷಕ್ಕೆ ಖುಷಿಪಡಿಸಲು ಅಧಿಕಾರಿಗಳ ಈ ನಡವಳಿಕೆ ಸರಿಯಲ್ಲ. ತಪ್ಪು ಮಾಡಿದ ಅಧಿಕಾರಿಗಳಿಗೆ ತಿಳಿ ಹೇಳುವ ಕೆಲಸವನ್ನು ಮಾಡಿ ಎಂದು ಗೃಹ ಸಚಿವರು ಮಾಡಲಿ ಎಂದು ಒತ್ತಾಯಿಸಿದರು.
ನಿನ್ನೆ ನಡೆದ ಘಟನೆ ಸಣ್ಣ ಘಟನೆಯಲ್ಲ. ವಿನಾಕಾರಣ ನಮ್ಮ ಕಾರ್ಯಕರ್ತೆಯನ್ನು ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ವರೆಗೆ ಕೂರಿಸಿದ್ದು ಅಕ್ಷಮ್ಯ ಅಪರಾಧ. ಜನರಿಗೆ ನ್ಯಾಯ ಕೊಡಬೇಕಾದ ಪೊಲೀಸರು ಹೀಗೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ನಿನ್ನೆ ಬಿಜೆಪಿ ಕಾರ್ಯಕರ್ತೆ ಛಾಯಾ ಅವರು ಸದಸ್ಯತ್ವ ಅಭಿಯಾನ ಮಾಡುವ ಸಂದರ್ಭದಲ್ಲಿ ರಾತ್ರಿ ಏಕಾಏಕಿ ಪೊಲೀಸರು ಅವರನ್ನು ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ರಾತ್ರಿ 12 ಗಂಟೆ ತನಕ ಕೂರಿಸಿದ್ದಾರೆ. ಎ್ಐಆರ್ ದಾಖಲಿಸುವುದಾಗಿ ಹೆದರಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಪೊಲೀಸ್ ಠಾಣೆಗೆ ಹೋಗಿ ಕಾರಣ ಕೇಳಿದ್ದಾರೆ. ಆಗ ಒಟಿಪಿಗಳನ್ನು ಡೌನ್‌ಲೋಡ್ ಮಾಡುತ್ತಿದ್ದಾರೆಂದು ಏನೇನೋ ಕಥೆ ಸುಳ್ಳು ನೆಪ ಹೇಳಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.