ಜಗಳ ಬಿಡಿಸಲು ಹೋದ ಪೊಲೀಸರ ಮೇಲೆ ಹಲ್ಲೆ
ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿಯಲ್ಲಿ ಘಟನೆ
ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು
Doddaballapur Crime: ಜಗಳ ನಡೆಯುತ್ತಿದ್ದರೆ ಬಿಡಿಸಲು ಹೋಗೋದು ಸಾಮಾನ್ಯ. ಆದ್ರೆ ಜಗಳ ಬಿಡಿಸಲು ಬಂದ ಪೊಲೀಸರ ಮೇಲೆಯೇ ತಿರುಗಿಬಿದ್ದರೆ ಹೇಗೆ? ಹೌದು.. ದೊಡ್ಡಬಳ್ಳಾಪುರದಲ್ಲಿ ಇಂಥದ್ದೇ ಘಟನೆ ನಡೆದಿದೆ. ಗಲಾಟೆ ಬಿಡಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಲಾಗಿದೆ. ಇದೀಗ ಈ ದೃಶ್ಯಗಳು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿಯಲ್ಲಿ ಇಬ್ಬರು ಯುವಕರು ಮದ್ಯದ ಅಮಲಿನಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು 112 ತುರ್ತು ಸೇವೆಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾದಾಗ, ಯುವಕರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ 112 ಸಿಬ್ಬಂದಿ ಮಣಿಕಂಠ ಹಾಗೂ ರಾಯಪ್ಪ ಪೂಜಾರಿ ಅವರ ಎದೆ, ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಗಾಯಗೊಂಡ ಇಬ್ಬರನ್ನೂ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆ ಹಾಗೂ ತನಿಖೆ ಬಳಿಕ ಪ್ರಕರಣದ ಬಗ್ಗೆ ಅಧಿಕೃತ ಮಾಹಿತಿ ಹೊರಬರಲಿದೆ.