ತುಮಕೂರು: ಗೃಹ ಸಚಿವರ ಎದುರು ಅಳಲು ತೋಡಿಕೊಳ್ಳಲು ಬಂದ ಪೊಲೀಸ್ ಹುದ್ದೆ ಆಕಾಂಕ್ಷಿಗೆ ಸಾರ್ವಜನಿಕರ ಎದುರೇ ತುಮಕೂರು ಡಿವೈಎಸ್ಪಿ ಶ್ರೀನಿವಾಸ್ ಕಪಾಳಮೋಕ್ಷ ಮಾಡಿದ್ದಾರೆ.
ಇಂತಹ ಘಟನೆ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಬಳಿ ಮಂಗಳವಾರ ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ನಡೆದಿದೆ. ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಮನವಿ ಕೊಡಲು ಉತ್ತರ ಕರ್ನಾಟಕ ಮೂಲದ ನೂರಾರು ಪೊಲೀಸ್ ಅಕಾಂಕ್ಷಿಗಳು ಆಗಮಿಸಿದ್ದರು.
ಈ ವೇಳೆ ಗೃಹ ಸಚಿವರನ್ನು ಭೇಟಿಯಾಗಲು ಪೊಲೀಸ್ ಅಕಾಂಕ್ಷಿಗಳು ಯತ್ನಿಸುತ್ತಿದ್ದರು. ಈ ವೇಳೆ ಪೊಲೀಸರು ಮತ್ತು ಪೊಲೀಸ್ ಆಕಾಂಕ್ಷಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳದಲ್ಲಿದ್ದ ಡಿವೈಎಸ್ಪಿ ಶ್ರೀನಿವಾಸ್, ಪೊಲೀಸ್ ಅಕಾಂಕ್ಷಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ ದೂರ ತಳ್ಳಿದ್ದಾರೆ. ಗೃಹ ಸಚಿವರಿದ್ದ ವೇದಿಕೆ ಬಳಿಯೇ ಈ ಘಟನೆ ನಡೆದಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಗೃಹ ಸಚಿವರ ಕಾಲಿಗೆ ಬಿದ್ದ ಪೊಲೀಸ್ ಅಕಾಂಕ್ಷಿಗಳು: ಕೊನೆಗೂ ಗೃಹ ಸಚಿವರನ್ನು ಭೇಟಿಯಾದ ಪೊಲೀಸ್ ಅಕಾಂಕ್ಷಿಗಳು, ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಿಸುವಂತೆ ಮನವಿ ಮಾಡುತ್ತಾ ಸಚಿವರ ಕಾಲಿಗೆ ಬಿದ್ದು ಪರಿಪರಿಯಾಗಿ ಬೇಡಿಕೊಂಡರು. ಎರಡು ವರ್ಷಗಳಿಂದ ಶಾಸಕರಿಂದ ಹಿಡಿದು ಸಿಎಂವರೆಗೂ ಮನವಿ ಮಾಡಿದ್ದೇವೆ. ಇದುವರೆಗೆ ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳ ಮಾಡಿಲ್ಲ. ನಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಕಣ್ಣೀರಿಟ್ಟರು.