ನ್ಯೂಸ್

ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ದ ಅವಹೇಳನಕಾರಿ ಹೇಳಿಕೆ; ದಳಪತಿ ವಿಜಯ್ ಆಪ್ತನನ್ನು ಬಂಧಿಸಿದ ಪೊಲೀಸರು| Arrested

Arrested: 41 ಮಂದಿಯ ಸಾವಿಗೆ ಕಾರಣವಾಗಿದ್ದ ಸೆ.27ರ ಕರೂರ್ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್​ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ನೀಡಿದ ಆರೋಪದ ಮೇಲೆ ನಟ ದಳಪತಿ ವಿಜಯ್ ಆಪ್ತ ಮತ್ತು ಟಿವಿಕೆ ಪಕ್ಷದ ಕಾರ್ಯಕರ್ತ ನಿರ್ಮಲ್​ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸೋಮವಾರ(ಅ. 13) ವರದಿಯಾಗಿದೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ನಿರ್ಮಲ್ ಕುಮಾರ್ ಅವರನ್ನು ಬಂಧಿಸಿದ್ದನ್ನು ಖಚಿಪಡಿಸಿದ್ದು, ಸ್ಥಳೀಯ ನ್ಯಾಯಾಲಯವು ಅವರನ್ನು ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ನಿರ್ಮಲ್ ಕುಮಾರ್ ಬಂಧನ ಯಾಕೆ?

ಕರೂರ್ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳು, ನಟ​ ದಳಪತಿ ವಿಜಯ್ ಅವರ ನಡೆಯನ್ನು ಟೀಕಿಸಿತ್ತು. ಮತ್ತು ಪಕ್ಷದ ವಿರುದ್ಧವೂ ತೀವ್ರವಾದ ಟೀಕೆ ಮಾಡಿ, ಘಟನೆ ಕುರಿತು ಎಸ್​ಐಟಿ ತನಿಖೆಗೆ ಆದೇಶಿಸಿದ್ದರು. ಈ ಹಿನ್ನೆಲೆ ನ್ಯಾಯಮೂರ್ತಿಗಳ ಹೇಳಿಕೆ ರಾಜಕೀಯ ಪ್ರೇರಿತ ಎಂದು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಪೊಲೀಸರು ನಿರ್ಮಲ್ ಕುಮಾರ್ ಅವರನ್ನು ಬಂಧಿಸಿದ್ದಾರೆ.

ಇನ್ನೂ ಕರೂರ್ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅನುಮತಿ ಪಡೆದಿದ್ದ ಕರೂರ್ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ಮಥಿಯಜಗನ್ ಸೇರಿದಂತೆ ಇಬ್ಬರು ಟಿವಿಕೆ ಕಾರ್ಯಕರ್ತರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ. ಟಿವಿಕೆ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬುಸ್ಸಿ ಆನಂದ್ ಅವರನ್ನೂ ಪೊಲೀಸರು ಹುಡುಕುತ್ತಿದ್ದಾರೆ ಎನ್ನಲಾಗಿದೆ.

ಇನ್ನೂ ಕರೂರ್ ಕಾಲ್ತುಳಿತ ಘಟನೆಯನ್ನು ಸಿಬಿಐ ತನಿಖೆಗೆ ಆದೇಶಿಸಿ ಇಂದು(ಅ. 13) ಸುಪ್ರೀಂಕೋರ್ಟ್ ಆದೇಶ ನೀಡಿದೆ. ಸಿಬಿಐ ತನಿಖೆ ಕೋರಿ ಟಿವಿಕೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿತ್ತು. (ಏಜೆನ್ಸೀಸ್)