ಬೆಂಗಳೂರು: ಪೂಜೆ ಮಾಡಿಸುವ, ಹೋಮ-ಹವನ ಮಾಡಿಸುವ ನೆಪದಲ್ಲಿ ಮನೆಗಳಿಗೆ ಹೋಗಿ, ಕಳ್ಳತನ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.
ಮೊದಲು ಸ್ವಾಮೀಜಿಗಳಂತೆ ಮನೆಯನ್ನು ಪ್ರವೇಶ ಮಾಡುತ್ತಿದ್ದ ಇವರು, ನಿಮ್ಮ ಮನೆಯಲ್ಲಿ ದೋಷವಿದೆ ಎಂದು ಹೇಳುತ್ತಿದ್ದರು. ದೋಷ ನಿವಾರಣೆಗೆ ಪೂಜೆ ಮಾಡಿಸಬೇಕು ಎಂದು ಮನೆ ಮಾಲೀಕನನ್ನು ನಂಬಿಸುತ್ತಿದ್ದರು. ಆ ಪೂಜೆಗೆ ಮನೆಯಲ್ಲಿದ್ದ ಚಿನ್ನ, ಒಡವೆಗಳನ್ನೆಲ್ಲ ಇಡುವಂತೆ ತಿಳಿಸುತ್ತಿದ್ದರು. ಹಾಗೇ ಮಾತನಾಡುತ್ತ, ಮನೆಯ ಬಗ್ಗೆ ಸಂಪೂರ್ಣ ವಿವರಣೆಯನ್ನೂ ಪಡೆಯುತ್ತಿದ್ದರು ಎನ್ನಲಾಗಿದೆ. ಈ ಕಳ್ಳ ಜೋಡಿ ದೊಡ್ಡದೊಡ್ಡ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿತ್ತು. ಒಂದು ದಿನ ಬಂದು ಚಿನ್ನದ ಒಡವೆಗಳು ಎಷ್ಟಿವೆ, ಎಲ್ಲಿಡುತ್ತಾರೆ ಎಂಬುದನ್ನೆಲ್ಲ ನೋಡಿಕೊಂಡು ಹೋಗುತ್ತಿದ್ದ ಇವರು, ಮರುದಿನ ಸಮಯ ನೋಡಿಕೊಂಡು ಬಂದು ಅದನ್ನೆಲ್ಲ ದೋಚುತ್ತಿದ್ದರು.
ಇವರ ಕೃತ್ಯದ ಬಗ್ಗೆ ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಸಂಪಿಂಗೆಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. 180 ಗ್ರಾಂ.ಗೂ ಹೆಚ್ಚು ಚಿನ್ನಾಭರಣಗಳನ್ನು ಇವರಿಂದ ವಶಪಡಿಸಿಕೊಳ್ಳಲಾಗಿದೆ. (ದಿಗ್ವಿಜಯ ನ್ಯೂಸ್)