ಬೆಂಗಳೂರು: ಪೊಲೀಸ್ ಠಾಣೆಯಿಂದ ಹೊರಟಿದ್ದ ವ್ಯಕ್ತಿಯೊಬ್ಬ ಕೆಲವೇ ದೂರದಲ್ಲಿ ಸಾವಿಗೀಡಾಗಿದ್ದು, ಶವವಾಗಿ ಪತ್ತೆಯಾಗಿದ್ದಾನೆ. ಈ ಕುರಿತು ಲಾಕಪ್ ಡೆತ್ ಎಂಬ ಆರೋಪ ಕೇಳಿಬಂದಿದ್ದರೂ ಬಳಿಕ ವಿಷಯ ಬೇರೆಯದೇ ಎಂಬುದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್. ಪುರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸಂಜಯ್ ಎಂಬಾತ ಸಾವಿಗೀಡಾದ ವ್ಯಕ್ತಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪಾರ್ಥಿಬನ್, ಫಯಾಜ್ ಪಾಷಾ ಹಾಗೂ ಸೈಯದ್ ಖಾಜಾ ಎಂಬವರನ್ನು ಬಂಧಿಸಿದ್ದಾರೆ. ಸೆ. 23ರಂದು ತಮಗೆ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದ ಪೊಲೀಸರು ಸಂಜಯ್ನನ್ನು ಠಾಣೆಗೆ ಕರೆದುಕೊಂಡು ಬಂದಿದ್ದರು. ಬಳಿಕ ಅಲ್ಲಿಂದ ಹೋಗಿದ್ದ ಸಂಜಯ್ ಕೆಲವೇ ನಿಮಿಷಗಳಲ್ಲಿ ಸಾವಿಗೀಡಾಗಿದ್ದ.
ಮಕ್ಕಳ ಕಳ್ಳ ಎಂದು ಆರೋಪಿಸಿ ಸಂಜಯ್ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಬಳಿಕ ಸಾರ್ವಜನಿಕರು 112 ನಂಬರ್ಗೆ ಕರೆ ಮಾಡಿ ದೂರು ನೀಡಿದ್ದರು. ಸ್ಥಳಕ್ಕೆ ಧಾವಿಸಿದ್ದ ರಾಮಮೂರ್ತಿನಗರ ಠಾಣೆ ಪೊಲೀಸರು ಸಂಜಯ್ನನ್ನು ವಶಕ್ಕೆ ಪಡೆದಿದ್ದರು. ಅಲ್ಲಿ ಆತ ತನ್ನ ಮೇಲೆ ಹಲ್ಲೆ ಮಾಡಿದ್ದವರ ಮೇಲೆ ದೂರು ನೀಡಲು ನಿರಾಕರಿಸಿದ್ದರಿಂದ ಪೊಲೀಸರು ಆತನನ್ನು ಬಿಟ್ಟು ಕಳಿಸಿದ್ದರು. ಠಾಣೆಯಿಂದ ಹೊರಟ ಸಂಜಯ್ ಬಳಿಕ ಕೆ.ಆರ್.ಪುರ ಐಟಿಐ ಕಾಲನಿ ಬಳಿ ಶವವಾಗಿ ಪತ್ತೆಯಾಗಿದ್ದ. ಈ ಕುರಿತು ರಾಮಮೂರ್ತಿನಗರ ಪೊಲೀಸರ ವಿರುದ್ಧ ಲಾಕಪ್ ಡೆತ್ ದೂರು ನೀಡಲಾಗಿತ್ತು.
ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ್ದು, ಹಲ್ಲೆ ನಡೆದಿದ್ದು ವರದಿಯಲ್ಲಿ ಕಂಡುಬಂದಿತ್ತು. ಮತ್ತೊಂದೆಡೆ ಪೊಲೀಸರಿಂದ ಹಲ್ಲೆ ಆಗಿಲ್ಲ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿತ್ತು. ಸಂಜಯ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಸದ್ಯ ಕೆ.ಆರ್. ಪುರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.