ಮುಂಬೈ: ಈತ ತನ್ನ ಅರ್ಧ ಆಯಸ್ಸು ತಲೆಮರೆಸಿಕೊಂಡೇ ಕಳೆದಿದ್ದ ಎಂದರೂ ತಪ್ಪಾಗಲಾರದು. ಏಕೆಂದರೆ ಐದು ಕೊಲೆಗಳನ್ನು ಮಾಡಿದ್ದ ಈತ ಅದಾಗಿ 28 ವರ್ಷಗಳ ಬಳಿಕ, ಅಂದರೆ ಈಗ ತನ್ನ 48ನೇ ವಯಸ್ಸಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ಬಂಧಿಸಿರುವ ಪೊಲೀಸರು ಇನ್ನಿಬ್ಬರು ಆರೋಪಿಗಳ ಹುಡುಕಾಟದಲ್ಲಿದ್ದಾರೆ.
ರಾಜ್ಕುಮಾರ್ ಅಮರ್ನಾಥ್ ಚೌಹಾಣ್ ಅಲಿಯಾಸ್ ಕಾಲಿಯ ಬಂಧಿಸಲ್ಪಟ್ಟಿರುವ ಆರೋಪಿ. 2007ರಿಂದ ಕತಾರ್ನಲ್ಲಿ ನೆಲೆಸಿದ್ದ ಈತ ಗುರುವಾರ ಭಾರತಕ್ಕೆ ಮರಳಿದ್ದಾಗ ಸಿಕ್ಕಿಹಾಕಿಕೊಂಡಿದ್ದಾನೆ. ವಲಸೆ ವಿಭಾಗದ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದು, ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈತ 1994ರ ನ. 16ರಂದು ಜಾಗ್ರಾಣಿ ದೇವಿ ಪ್ರಜಾಪತಿ ( ಹಾಗೂ ಆಕೆಯ ಮಕ್ಕಳಾದ ಪ್ರಮೋದ್ (5), ಪಿಂಕಿ (3), ಚಿಂಟು (2) ಮತ್ತು ಮೂರು ತಿಂಗಳ ಮಗು ಪಿಂಟುವನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಮೀರಾ ಭಯಾಂಡರ್ ವಸಾಯಿ ವಿರಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ಈತನಿಗೆ ಅನಿಲ್ ಸರೋಜ್ ಮತ ಸುನಿಲ್ ಸರೋಜ್ ಅವರು ಸಹಕರಿಸಿದ್ದು, ಪೊಲೀಸರು ಇವರ ಶೋಧದಲ್ಲಿದ್ದಾರೆ.
ಕೊಲೆಯಾದ ಎಲ್ಲರೂ ಹಾಗೂ ಆರೋಪಿಗಳು ಮೀರಾ ರೋಡ್ನ ಪೆಂಕರ್ಪಡದ ಭಾರ್ವಾಡ್ ಚಾವ್ಲ್ನಲ್ಲಿ ನೆಲೆಸಿದ್ದರು. 1994ರ ನ. 15ರಂದು ಜಾಗ್ರಾಣಿ ದೇವಿ ಹಾಗೂ ಆಕೆಯ ಮಗಳು ಪಿಂಕಿ ಅನಿಲ್ನ ಸೂಟ್ಕೇಸ್ನ ಹ್ಯಾಂಡಲ್ ಮುರಿದು ಹಾಕಿದ್ದರು. ಈ ಬಗ್ಗೆ ನ. 16ರ ಬೆಳಗ್ಗೆ ಆಕೆಯನ್ನು ವಿಚಾರಿಸಲು ಹೋಗಿದ್ದಾಗ ಅನಿಲ್ ಆಕೆಯ ಮೇಲೆ ಕೈಮಾಡಿದ್ದು, ಇದು ದೊಡ್ಡ ಗಲಾಟೆಗೆ ಕಾರಣವಾಗಿತ್ತು. ನಂತರ ನಾನು ಅನಿಲ್, ಸುನಿಲ್ ಮೂವರೂ ಆಕೆ ಇದ್ದಲ್ಲಿಗೆ ಹರಿತವಾದ ಆಯುಧದೊಂದಿಗೆ ತೆರಳಿ ಇರಿದು, ಕೊಚ್ಚಿ ಕೊಲೆ ಮಾಡಿದ್ದಾಗಿ ಚೌಹಾಣ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ. ಕೊಲೆ ಬಳಿಕ ಆರೋಪಿಗಳು ಬಾಗಿಲು ಹಾಕಿ ಪರಾರಿಯಾಗಿದ್ದರು. ಜಾಗ್ರಾಣಿಯ ಪತಿ ರಾಜ್ನಾರಾಯಣ್ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಅನಿಲ್-ಸುನಿಲ್ ಉತ್ತರಪ್ರದೇಶ ಮೂಲದ ಕಸಿನ್ಸ್ಗಳಾಗಿದ್ದು, ಚೌಹಾಣ್ ಬನಾರಸ್ನಿಂದ ಬಂದಿದ್ದವನಾಗಿದ್ದ. ಸೂಟ್ಕೇಸ್ ಮುರಿದು ಹಾಕಿದ್ದ ಬಗ್ಗೆ ರಾಜ್ನಾರಾಯಣ್ಗೆ ವಿಷಯ ಗೊತ್ತಾಗಿದ್ದು, ಆತ ಜಗಳ ಮಾಡದಂತೆ ಮನವಿ ಮಾಡಿಕೊಂಡಿದ್ದ ಮತ್ತು ಹೊಸ ಸೂಟ್ಕೇಸ್ ತೆಗೆಸಿಕೊಡುವ ಭರವಸೆ ಕೂಡ ಕೊಟ್ಟಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ನಂತರ ಪ್ರಕರಣ ದಾಖಲಾಗಿದ್ದರೂ ಆರೋಪಿಗಳು ಪತ್ತೆ ಆಗಿರಲಿಲ್ಲ. ಈ ಮಧ್ಯೆ 2007ರಲ್ಲೇ ರಾಜ್ನಾರಾಯಣ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಎಂಬಿವಿವಿ ಪೊಲೀಸರು ಪತ್ತೆ ಆಗದೆ ಉಳಿದಿರುವ ಹಳೇ ಕೇಸ್ಗಳನ್ನು ಪರಿಶೀಲನೆಯಲ್ಲಿ ತೊಡಗಿದ್ದಾಗ 2020ರಲ್ಲಿ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿತ್ತು. ಅಲ್ಲಿಂದ ಮತ್ತೆ ಆರೋಪಿಗಳ ಪತ್ತೆ ಕಾರ್ಯ ಆರಂಭವಾಗಿದ್ದು, ಅದರ ಅಂಗವಾಗಿ ಗುರುವಾರ ಒಬ್ಬ ಸಿಕ್ಕಿಬಿದ್ದಿದ್ದಾನೆ. - ಏಜೆನ್ಸೀಸ್