ನ್ಯೂಸ್

ಹನುಮಾನ್ ಚಾಲೀಸ ವಿವಾದ; ಸಂಸದೆ-ಶಾಸಕರ ಬಂಧನ..

ಮುಂಬೈ: ಲೌಡ್​ ಸ್ಪೀಕರ್​ ವಿವಾದದ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ಹನುಮಾನ್​ ಚಾಲೀಸ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ಹಾಗೂ ಸಂಸದೆಯೊಬ್ಬರು ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ.

ಮಹಾರಾಷ್ಟ್ರ ಸಂಸದೆ ನವ್​ನೀತ್ ರಾಣಾ ಹಾಗೂ ಆಕೆಯ ಪತಿ, ಶಾಸಕರೂ ಆಗಿರುವ ರವಿ ರಾಣಾ ಬಂಧಿತ ಆರೋಪಿಗಳು. ಇವರನ್ನು ಮುಂಬೈನ ಖಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಸಂಸದೆ ಹಾಗೂ ಶಾಸಕರನ್ನು ಪೊಲೀಸರು ನಾಳೆ ನ್ಯಾಯಾಲಯಕ್ಕೆ ಒಪ್ಪಿಸಲಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನಿವಾಸ ಮಾತೋಶ್ರೀ ಎದುರು ಹನುಮಾನ್ ಚಾಲೀಸ ಪಠಿಸುವುದಾಗಿ ಶಾಸಕ ರವಿ ರಾಣಾ ಹಾಗೂ ಸಂಸದೆ ನವ್​ನೀತ್ ರಾಣಾ ದಂಪತಿ ಬೆದರಿಕೆ ಒಡ್ಡಿದ್ದರು. ಈ ಹಿನ್ನೆಲೆಯಲ್ಲಿ ಶಿವಸೇನೆಯ ಕಾರ್ಯಕರ್ತರು ನಗರದ ಹಲವೆಡೆ ಜಮಾಯಿಸಿದ್ದಲ್ಲದೆ, ಮಾತೋಶ್ರೀ ಮುಂದೆಯೂ ಸೇರಿದ್ದರು. ಅಲ್ಲದೆ ಶಿವಸೇನೆ ಕಾರ್ಯಕರ್ತರ ದೂರಿನ ಮೇರೆಗೆ ಪೊಲೀಸರು ಇವರನ್ನು ಬಂಧಿಸಿದ್ದಾರೆ.