ನ್ಯೂಸ್

ವಿಮಾನ ಪ್ರಯಾಣಿಕರ ಲಗೇಜಿನಲ್ಲಿದ್ದವು ಅಪರೂಪದ ಪ್ರಾಣಿಗಳು!; ನಾಲ್ವರ ಬಂಧನ, 157 ಪ್ರಾಣಿಗಳ ರಕ್ಷಣೆ

ಬೆಂಗಳೂರು: ವಿದೇಶದಿಂದ ವಿಮಾನದಲ್ಲಿ ಅಪರೂಪದ ಪ್ರಾಣಿಗಳನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಮಹಿಳೆ ಸೇರಿ ನಾಲ್ವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(ಕೆಐಎ) ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳಿಂದ 157 ಪ್ರಾಣಿಗಳನ್ನು ಸಂರಕ್ಷಣೆ ಮಾಡಿದ್ದಾರೆ.

ಬ್ಯಾಂಕಾಕ್‌ನಿಂದ ಕೆಐಎಗೆ ಜ.22ರಂದು ಆಗಮಿಸಿದ ವಿಮಾನದಲ್ಲಿ ಬಂದಿಳಿದ ಮಹಿಳೆ ಸೇರಿ ಮೂವರನ್ನು ವಶಕ್ಕೆ ಪಡೆದ ಕಸ್ಟಮ್ ಅಧಿಕಾರಿಗಳು ರಾಜ್ಯ ಅರಣ್ಯ ಅಧಿಕಾರಿಗಳ ಸಹಾಯದಿಂದ ಲಗೇಜು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಪರೂಪದ 4 ಸಸ್ತನಿಗಳು ಮತ್ತು 14 ಸರೀಸೃಪಗಳು ಪತ್ತೆಯಾಗಿವೆ.

ಇದಲ್ಲದೆ, ಬಂಧಿತ ಆರೋಪಿಗಳ ವಿಚಾರಣೆ ವೇಳೆ ಸಿಕ್ಕ ಮಾಹಿತಿ ಮೇರೆಗೆ ಬೆಂಗಳೂರಿನ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದಾಗ 48 ವಿವಿಧ ಜಾತಿಯ 139 ಪ್ರಾಣಿಗಳನ್ನು ಅಕ್ರಮವಾಗಿ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ. ಮತ್ತೊಬ್ಬ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ. ಆರೋಪಿಗಳಿಂದ ಸಂರಕ್ಷಣೆ ಮಾಡಿದ ಪ್ರಾಣಿಗಳನ್ನು ಬನ್ನೇರುಘಟ್ಟ ಜೈವಿಕ ಪಾರ್ಕ್‌ಗೆ ಹಸ್ತಾಂತರ ಮಾಡಲಾಗಿದೆ ಎಂದು ಕಸ್ಟಮ್ ಅಧಿಕಾರಿಗಳು ತಿಳಿಸಿದ್ದಾರೆ.