ರಾಂಚಿ: ಜಾರ್ಖಂಡ್ನ ಜಮ್ಶೆಡ್ಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಕಲಿ ಪಾಸ್‌ಪೋರ್ಟ್ ಜಾಲ ಮತ್ತು ವಿದೇಶಿ ಪರಮಾಣು ವಿಜ್ಞಾನಿ ಜೊತೆಗಿನ ಸಂಪರ್ಕ ಸೇರಿದಂತೆ ಗೂಡಚಾರಿಕೆ(Spy) ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 59 ವರ್ಷದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಆರೋಪಿಯನ್ನು ಮೊಹಮ್ಮದ್ ಆದಿಲ್ ಹುಸೇನಿ ಎಂದು ಗುರುತಿಸಲಾಗಿದೆ. ಸೈಯದ್ ಆದಿಲ್ ಹುಸೇನ್, ನಸಿಮುದ್ದೀನ್ ಮತ್ತು ಸೈಯದ್ ಆದಿಲ್ ಹುಸೇನಿ ಎಂಬ ಮೂರು ಹೆಸರಿಂದ ಗುರುತಿಸಿಕೊಂಡಿದ್ದ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರಮೋದ್ ಸಿಂಗ್ ಕುಶ್ವಾ, ಆರೋಪಿ ಆದಿಲ್ ಜಮ್ಶೆಡ್‌ಪುರದ ಟಾಟಾ ನಗರದ ನಿವಾಸಿಯಾಗಿದ್ದು, ವಿದೇಶದಲ್ಲಿರುವ ಪರಮಾಣು ವಿಜ್ಞಾನಿಯೊಂದಿಗೆ ಸಂಪರ್ಕದಲ್ಲಿದ್ದನು. ಪಾಕಿಸ್ತಾನ ಸೇರಿದಂತೆ ಹಲವಾರು ದೇಶಗಳಿಗೆ ಪ್ರಯಾಣಿಸಿದ್ದು, ನಕಲಿ ದಾಖಲೆಗಳನ್ನು ಬಳಸಿ ಸೂಕ್ಷ್ಮವಾದ ಮೂರು ಗುರುತಿನ ಚೀಟಿಗಳನ್ನು ಪಡೆದಿದ್ದಾನೆ ಎಂದು ಹೇಳಿದ್ದಾರೆ.
ಆದಿಲ್ ಮತ್ತು ಆತನ ಸಹೋದರ ಅಖ್ತರ್ ಹುಸೇನಿ ವಿದೇಶಗಳಿಗೆ ಸೂಕ್ಷ್ಮ ಮಾಹಿತಿಯನ್ನು ಪೂರೈಸುತ್ತಿದ್ದು, ನಕಲಿ ದಾಖಲೆಗಳನ್ನು ಬಳಸಿಕೊಂಡು ಅನೇಕ ಭಾರತೀಯ ಪಾಸ್‌ಪೋರ್ಟ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಇಡೀ ಜಾಲವು ಜೆಮ್ಶೆಡ್‌ಪುರದಿಂದಲೇ ಕಾರ್ಯನಿರ್ವಹಿಸುತ್ತಿತ್ತು. ಅಲ್ಲಿ ನಕಲಿ ಗುರುತಿನ ಚೀಟಿಗಳು ಮತ್ತು ಪಾಸ್‌ಪೋರ್ಟ್‌ಗಳನ್ನು ನಕಲಿ ದಾಖಲೆಗಳ ಸಹಾಯದಿಂದ ತಯಾರಿಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಪೊಲೀಸರು ಆದಿಲ್ ಬಳಿಯಿಂದ ಒಂದು ಮೂಲ ಪಾಸ್‌ಪೋರ್ಟ್ ಮತ್ತು ಎರಡು ನಕಲಿ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅ. 26 ರಂದು ಬಿಎನ್‌ಎಸ್‌ನ ಸೆಕ್ಷನ್ 61(2) (ಕ್ರಿಮಿನಲ್ ಪಿತೂರಿ), 318 (ವಂಚನೆ), 338 (ಮೌಲ್ಯಯುತ ಭದ್ರತೆ, ವಿಲ್, ಇತ್ಯಾದಿಗಳ ನಕಲಿ) ಮತ್ತು 340 (ನಕಲಿ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆ ಮತ್ತು ಅದನ್ನು ಅಸಲಿಯಾಗಿ ಬಳಸುವುದು) ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)