ವಿಶಾಖಪಟ್ಟಣ: ಎಲ್ಜಿ ಪಾಲಿಮರ್ಸ್ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ವಿಷಾನಿಲ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೇರಿ 12 ಜನರನ್ನು ಬಂಧಿಸಿದ್ದಾರೆ.
ದಕ್ಷಿಣ ಕೊರಿಯಾ ಮೂಲದ ಕಾರ್ಖಾನೆಯಲ್ಲಿ ಮೇ 7ರ ಬೆಳಗಿನ ಜಾವ ಸಂಭವಿಸಿದ್ದ ವಿಷಾನಿಲ ದುರಂತದಲ್ಲಿ 12 ಜನರು ಮೃತಪಟ್ಟು, ಸಾವಿರಾರು ಮಂದಿ ಅಸ್ವಸ್ಥಗೊಂಡಿದ್ದರು.
ಕಂಪನಿಯ ಸಿಇಒ ಸಂಕೆ ಜಿಯಾಂಗ್, ಇಬ್ಬರು ನಿರ್ದೇಶಕರು ಸೇರಿ ಒಟ್ಟು 12 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ರಾಜೀವ್ಕುಮಾರ್ ಮೀನಾ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಲು ನಿರಾಕರಿಸಿದೆ.
ಕಾರ್ಖಾನೆಯ ಬೃಹತ್ ಟ್ಯಾಂಕ್ಗಳಿಂದ ವಿಷಕಾರಿ ಸ್ಟೈರೀನ್ ಅನಿಲ ಸೋರಿಕೆಯಾಗಿತ್ತು. ಘಟನೆಯ ತನಿಖೆ ನಡೆಸಲು ಸರ್ಕಾರ ನ್ಯಾಯಾಂಗ ಸಮಿತಿ ರಚಿಸಿತ್ತು. ಅಲ್ಲದೇ, ರಾಷ್ಟ್ರೀಯ ನ್ಯಾಯಾಧಿಕರಣ ಕಂಪನಿಗೆ 50 ಕೋಟಿ ರೂ. ದಂಡ ವಿಧಿಸಿತ್ತು.