ಮುಂಬೈ: ಬಾರ್ ಆ್ಯಂಡ್ ರೆಸ್ಟೋರೆಂಟ್ನ ವೇಟರ್ ಓರ್ವ ಅದೇ ಬಾರ್ನ ಮಾಲೀಕ ಹಾಗೂ ಕ್ಲೀನರ್ನನ್ನುಹತ್ಯೆ ಮಾಡಿ, ಈಗ ಬಂಧಿತನಾಗಿದ್ದಾನೆ.
ಮುಂಬೈನ ಮೀರಾ ರೋಡ್ನಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಘಟನೆ ನಡೆದಿದ್ದು, ಅಲ್ಲಿನ ವಾಟರ್ ಟ್ಯಾಂಕ್ನಲ್ಲಿ ಮೃತದೇಹಗಳು ಪತ್ತೆಯಾಗಿವೆ.
ಕುಲ್ಲು ಯಾದವ್ ಎಂಬಾತ ಆರೋಪಿ. ಈತ ಮೂಲತಃ ಉತ್ತರ ಪ್ರದೇಶದ ಪಿಪ್ರಿ ಪಟ್ಟಣದವನಾಗಿದ್ದು, ಮುಂಬೈನ ಶಬರಿ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ. ಎರಡು ಹತ್ಯೆಗಳನ್ನು ಮಾಡಿದ ಈತ ಅಲ್ಲಿಂದ ಪರಾರಿಯಾಗಿದ್ದ. ಕೊಲೆ ನಡೆದ ದಿನದಿಂದಲೂ ವೇಟರ್ ನಾಪತ್ತೆಯಾಗಿದ್ದರಿಂದ ಪೊಲೀಸರಿಗೆ ಅನುಮಾನ ಬಂದು ಈತನ ಬೆನ್ನತ್ತಿದ್ದರು. ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆಗೆ ಕಾರಣವನ್ನು ಬಿಚ್ಚಿಟ್ಟಿದ್ದಾನೆ.
ಲಾಕ್ಡೌನ್ ಇರುವುದರಿಂದ ಈ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಮೂವರು ಮಾತ್ರ ಇದ್ದರು. ಪಾರ್ಸಲ್ ಕೊಡಲು ಅವಕಾಶ ಇದ್ದುದರಿಂದ ರೆಸ್ಟೋರೆಂಟ್ ಮ್ಯಾನೇಜರ್ ಹರೇಶ್ ಶೆಟ್ಟಿ (48), ಕ್ಲೀನರ್ ನರೇಶ್ ಪಂಡಿತ್ (42) ಹಾಗೂ ಬಂಧಿತ ಆರೋಪಿ ಕುಲ್ಲು ಯಾದವ್ ಅಲ್ಲಿಯೇ ಇದ್ದರು.
ರೆಸ್ಟೋರೆಂಟ್ನಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಜನರಿಗೆ ಪಾರ್ಸ್ಲ್ ನೀಡಲು ಅನ್ನ ಮತ್ತು ದಾಲ್ ಮಾಡುತ್ತಿದ್ದರು. ನಾನೂ ಪ್ರತಿದಿನವೂ ಅದನ್ನೇ ತಿನ್ನಬೇಕಿತ್ತು. ಆದರೆ ಮ್ಯಾನೇಜರ್ ಮತ್ತು ಕ್ಲೀನರ್ ತಮಗೆ ಬೇಕಾದ ಆಹಾರಗಳನ್ನು ಹೊರಗಿನಿಂದ ತರಿಸಿಕೊಂಡು ತಿನ್ನುತ್ತಿದ್ದರು. ನಾನದನ್ನು ಪ್ರಶ್ನಿಸಿದ್ದಕ್ಕೆ ನನಗೆ ಹೊಡೆದಿದ್ದರು. ಅದೇ ಸಿಟ್ಟಿನಿಂದ ಅವರಿಬ್ಬರೂ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದೆ ಎಂದು ಆರೋಪಿ ಕುಲ್ಲು ಯಾದವ್ ತಿಳಿಸಿದ್ದಾನೆ.
ರೆಸ್ಟೋರೆಂಟ್ನಲ್ಲಿ ನಾನೇ ಅನ್ನ ಮತ್ತು ದಾಲ್ ತಯಾರಿಸುತ್ತಿದೆ. ನಾನು ಪ್ರತಿದಿನವೂ ಅದನ್ನೇ ತಿನ್ನಬೇಕಿತ್ತು. ತುಂಬ ಸಲ ಜಗಳವಾಡಿದ್ದೆ. ಇದೇ ಕಾರಣಕ್ಕೆ ಹತ್ಯೆ ಮಾಡಬೇಕಾಯಿತು ಎಂದು ಪೊಲೀಸ್ ವಿಚಾರಣೆಯಲ್ಲಿ ಹೇಳಿಕೊಂಡಿದ್ದಾನೆ.
ಇಬ್ಬರ ಕುತ್ತಿಗೆ, ತಲೆ, ಮುಖದ ಮೇಲೆ ಕೊಡಲಿಯಿಂದ ಹಲ್ಲೆ ನಡೆಸುತ್ತಿದ್ದಂತೆ ಅವರಿಬ್ಬರೂ ಮೃತಪಟ್ಟಿದ್ದಾರೆ. ಅದಾದ ಬಳಿಕ ಮೃತದೇಹವನ್ನು ರೆಸ್ಟೋರೆಂಟ್ನ ವಾಟರ್ ಟ್ಯಾಂಕ್ನಲ್ಲಿ ಹಾಕಿ ಕುಲ್ಲು ಯಾದವ್ ಓಡಿಹೋಗಿದ್ದ. ಈ ಘಟನೆ ನಡೆದಿದ್ದು ಜೂ.1ರಂದು. ಗುರುವಾರ ರಾತ್ರಿ ಮಾಲೀಕ ಗಂಗಾಧರ್ ಪಾಯಡೆ (63) ರೆಸ್ಟೋರೆಂಟ್ಗೆ ಆಗಮಿಸಿದಾಗ ಅಲ್ಲೆಲ್ಲ ಕೆಟ್ಟ ವಾಸನೆ ಬರುತ್ತಿತ್ತು. ಏನೋ ಅನುಮಾನ ಬಂದು ಅವರು ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿ ಮೃತರಿಬ್ಬರ ಮೊಬೈಲ್ ಫೋನ್ ತೆಗೆದುಕೊಂಡು ಓಡಿಹೋಗಿದ್ದ. ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಆರೋಪಿಯ ಮೊಬೈಲ್ ಫೋನ್ನ್ನು ಟ್ರ್ಯಾಕ್ ಮಾಡಿದ್ದರು. ಆಗ ಆತ ಪುಣೆಯ ಬಾರ್ವೊಂದರಲ್ಲಿ ಇರುವುದು ತಿಳಿದು, ಅಲ್ಲಿಗೆ ಹೋಗಿ ಬಂಧಿಸಿದ್ದಾರೆ.
ಈತ ಕೊಲ್ಕತ್ತಾದಲ್ಲಿ ಒಂದು ಕೊಲೆ ಮಾಡಿ, ಜೈಲು ಶಿಕ್ಷೆ ಅನುಭವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)