ಬೆಂಗಳೂರು: ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಸ್ಪಾ ಮಾಲೀಕರೊಬ್ಬರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಖಾಸಗಿ ಸುದ್ದಿ ವಾಹಿನಿಯ CEO ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ. ಇದಲ್ಲದೆ ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ ಎಂದು ಬೊಬ್ಬೆ ಹೊಡೆದು ಸುದ್ದಿಯಾಗಿದ್ದ ಖ್ಯಾತ ನಿರೂಪಕಿ ದಿವ್ಯಾ ವಸಂತ ಅವರ ಹೆಸರು ಕೇಳಿ ಬಂದಿದ್ದು, ಸದ್ಯ ಆಕೆ ತಲೆಮಾರಿಸಿಕೊಂಡಿದ್ದಾರೆ.
ಮಸಾಜ್ ಪಾರ್ಲರ್ನಲ್ಲಿ ಸ್ಟಿಂಗ್ ಆಪರೇಷನ್ ನೆಪದಲ್ಲಿ ಸುಲಿಗೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಖಾಸಗಿ ಸುದ್ದಿ ವಾಹಿನಿಯ CEO ರಾಜಾನುಕುಂಟೆ ವೆಂಕಟೇಶ್, ನಿರೂಪಕಿ ದಿವ್ಯಾ ವಸಂತ ಅವರ ಸಹೋದರ ಸಂದೇಶ್ರನ್ನು ಜೀವನ್ಭೀಮಾ ನಗರ ಪೊಲೀಸರು ಬಂಧಿಸಿದ್ದು, ಇನ್ನುಳಿದ ಆರೋಪಿಗಳಾದ ದಿವ್ಯಾ ವಸಂತ, ಆಕಾಶ್ ಹಾಗೂ ಸಚಿನ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರಿನ ಇಂದಿರಾನಗರದಲ್ಲಿರುವ ಟ್ರೀ ಸ್ಪಾ ಬ್ಯೂಟಿ ಆ್ಯಂಡ್ ಮಸಾಜ್ ಪಾರ್ಲರ್ ಮೇಲೆ ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಮಾಡಿದ ವೀಡಿಯೋಗಳನ್ನು ತೋರಿಸಿ ಬೆದರಿಸಿದ ಆರೋಪ ಇದಾಗಿದೆ. ವಿಡಿಯೋ ತೋರಿಸಿ ಸ್ಪಾ ಮಾಲೀಕ ಶಿವಶಂಕರ್ಗೆ 15 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಕೊನೆಗೆ 8 ಲಕ್ಷ ರೂಪಾಯಿ ನೀಡುವಂತೆ ತಾಕೀತು ಮಾಡಿದ್ದಾರೆ.
ಬಂಧಿತ ಆರೋಪಿಗಳಾದ ರಾಜಾನುಕುಂಟೆ ವೆಂಕಟೇಶ್ ಸ್ಪಾ ಮಾಲೀಕರಿಗೆ ವಿಡಿಯೋ ತೋರಿಸಿ ಹಣ ಕೊಡದೆ ಇದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿದ್ದನಂತೆ. ಈ ಸಂಬಂಧ ಶಿವಶಂಕರ್ ಜೀವನ್ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳ ಕೃತ್ಯದ ಬಗ್ಗೆ ತಿಳಿದು ಬಂದಿದ್ದು, 100ಕ್ಕೂ ಹೆಚ್ಚು ಜನರಿಗೆ ಬ್ಲ್ಯಾಕ್ಮೇಲ್ ಮಾಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿಗಳಾದ ರಾಜಾನುಕುಂಟೆ ವೆಂಕಟೇಶ್, ದಿವ್ಯಾ ವಸಂತ ಸಹೋದರ ಸಂದೇಶ್ನನ್ನು ವಶಕ್ಕೆ ಪಡೆದಿದ್ದು, ಮೂರು ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಕುಲ್ದೀಪ್-ಚಹಲ್ ಹೇಳಿಕೊಟ್ಟಂತೆ ಮಾಡಲು ನನ್ನಿಂದ ಆಗಲಿಲ್ಲ; ಪ್ರಧಾನಿ ಬಳಿ ರೋಹಿತ್ ಶರ್ಮಾ ಹೀಗಂದಿದ್ಯಾಕೆ
ವೆಂಕಟೇಶ್ ಹಾಗೂ ದಿವ್ಯಾ ತಂಡ ಕೆಲ ದಿನಗಳ ಹಿಂದೆ ಇಂದಿರಾನಗರದ ಶ್ರೀ ಸ್ಪಾ ಆ್ಯಂಡ್ ಬ್ಯೂಟಿ ಪಾರ್ಲ‌್ರಗೆ ಈಶಾನ್ಯ ರಾಜ್ಯದ ಯುವತಿಯನ್ನು ಕೆಲಸಕ್ಕೆ ಸೇರಿಸಿತ್ತು. ಬಳಿಕ ಗ್ರಾಹಕನ ಸೋಗಿನಲ್ಲಿ ಸ್ವಾಗೆ ದಿವ್ಯಾ ಸೋದರ ಸಂದೇಶ್ ತೆರಳಿದ್ದ. ಈ ಮೊದಲೇ ಸ್ಥಾನಲ್ಲಿ ಕೆಲಸದಲ್ಲಿದ್ದ ತನ್ನ ಗ್ಯಾಂಗ್‌ನ ಯುವತಿ ಬಳಿಯೇ ಮಸಾಜ್‌ಗೆ ಗೊತ್ತುಪಡಿಸಿದ್ದ. ಆಗ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾವಿಟ್ಟು ಸಲುಗೆಯಿಂದಿರುವ ದೃಶ್ಯಾವಳಿಗಳನ್ನು ಸಂದೇಶ್ ಚಿತ್ರೀಕರಿಸಿಕೊಂಡಿದ್ದ. ಬಳಿಕ ಸ್ಪಾ ಮಾಲೀಕರನ್ನು ಸಂಪರ್ಕಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸಂತ್ರಸ್ತರಿಂದ 80 ಸಾವಿರ, 50 ಸಾವಿರ ಹಾಗೂ 1 ಲಕ್ಷ ರು.ವರೆಗೆ ಆನ್‌ಲೈನ್ ಮೂಲಕ ತಮ್ಮ ಖಾತೆಗಳಿಗೆ ವೆಂಕಟೇಶ್ ಹಾಗೂ ದಿವ್ಯಾ ಹಣ ವರ್ಗಾಯಿಸಿಕೊಂಡಿರುವುದು ತನಿಖೆಯಲ್ಲಿ ಪತ್ತೆ ಯಾಗಿದೆ ಎಂದು ಮೂಲಗಳು ಹೇಳಿವೆ.
ಆರೋಪಿ ವೆಂಕಟೇಶ್, ಯೂಟ್ಯೂಬ್ ಚಾಲೆನ್ ಒಂದನ್ನು ಹೊಂದಿದ್ದು, ಕೆಲ ಸಮಯದ ಹಿಂದಷ್ಟೇ ಈ ಚಾನೆಲ್ನಲ್ಲಿ ನಿರೂಪಕಿಯಾಗಿ ದಿವ್ಯಾ ಕಾಣಿಸಿಕೊಂಡಿದ್ದರಂತೆ. ಸಂದರ್ಶನವೊಂದರ ವೇಳೆ ಇಬ್ಬರಿಗೂ ಪರಿಚಯ ಆಗಿತ್ತು ಎನ್ನಲಾಗಿದ್ದು, ಬೇಗ ಹಣ ಮಾಡುವ ಉದ್ದೇಶದಿಂದ ಆರೋಪಿಗಳು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಪೊಲೀಸ್ ತನಿಖೆ ವೇಳೆ ಇನ್ನೂ ಹಲವರಿಗೆ ಇದೇ ರೀತಿ ಲಕ್ಷ ಲಕ್ಷ ಸುಲಿಗೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಜನರಿಂದ ಸುಲಿಗೆ ಮಾಡುತ್ತಿದ್ದ ಉಳಿದ ಆರೋಪಿಗಳಾದ ದಿವ್ಯಾ ವಸಂತ, ಆಕಾಶ್ ಹಾಗೂ ಸಚಿನ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಖಾಸಗಿ ಸುದ್ದಿ ವಾಹಿನಿಯು ಆರೋಪಿ ವೆಂಕಟೇಶ್ ತಮ್ಮ ಕಂಪನಿಯ CEO ಅಲ್ಲಾ ಎಂದು ಸ್ಪಷ್ಟಪಡಿಸಿದ್ದು, ಬಂಧಿತರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಕಟಣೆ ಮೂಲಕ ತಿಳಿಸಿದೆ. ಆರೋಪಿಗಳು ತಮ್ಮ ಕೆಲಸಕ್ಕೆ ಸಂಸ್ಥೆಯ ಹೆಸರು ದುರ್ಬಳಕೆ ಮಾಡಿಕೊಂಡಿರುವುದರಿಂದ ಕಾನೂನು ಕ್ರಮಕ್ಕೆ ಮುಂದಾಗಿದ್ದು, ದಯವಿಟ್ಟು ಆರೋಪಿಗಳ ಹೆಸರಿನ ಜೊತೆ ಸಂಸ್ಥೆಯ ಹೆಸರನ್ನು ಸೇರಿಸಬೇಡಿ ಎಂದು ಕಂಪನಿ ಪ್ರಕಟಣೆ ಮೂಲಕ ತಿಳಿಸಿದೆ.