Rajnath Singh: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ಒಂದು ದಿನ ಭಾರತದ ಭಾಗವಾಗಲಿದೆ. ನಾವು ಅದರ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅದೇ ತಾನಾಗಿಯೇ ಭಾರತವನ್ನು ಸೇರುತ್ತದೆ ಎಂದು ಸೋಮವಾರ(ಸೆ.22) ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮೊರಾಕ್ಕೋದಲ್ಲಿ ಭಾರತೀಯರನ್ನುದ್ದೇಶಿಸಿ ಮಾತನಾಡಿರುವ ರಾಜನಾಥ್ ಸಿಂಗ್, ಪಿಒಕೆ ಜನರು ಈಗ ಪ್ರಸ್ತುತ ಪಾಕ್ ಆಡಳಿತದಿಂದ ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ. ನೀವು ಪ್ರತ್ಯೇಕತೆಯ ಘೋಷಣೆಗಳು ಕೇಳಿರಬಹುದು. ಐದು ವರ್ಷಗಳ ಹಿಂದೆ ಕಾಶ್ಮೀರ ಕಣಿವೆಯಲ್ಲಿ ನಾನು ಭಾರತೀಯ ಸೇನೆಯನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದ್ದೆ,.ನಾವು ಪಿಒಕೆ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳುವ ಅಗತ್ಯವಿಲ್ಲ, ಅದು ಹೇಗೂ ನಮ್ಮದು. ಪಿಒಕೆ ಸ್ವತಃ 'ಮೇ ಭಿ ಭಾರತ್ ಹೂಂ' ಎಂದು ಹೇಳುತ್ತದೆ. ಆ ದಿನ ಬರುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.
ಮೇ 7ರಂದು ನಡೆದ ಆಪರೇಷನ್ ಸಿಂದೂರ್ ಸಂದರ್ಭದಲ್ಲಿ ಪಿಒಕೆ ವಶಪಡಿಸಿಕೊಳ್ಳುವ ಅವಕಾಶವನ್ನು ಕೇಂದ್ರ ಸರ್ಕಾರ ಕಳೆದು ಕೊಂಡಿದೆ ಎಂಬ ಆರೋಪದ ಬಗ್ಗೆ ಈ ರೀತಿಯಾಗಿ ರಾಜನಾಥ್ ಸಿಂಗ್ ಹೇಳಿದರು. ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಹಲವು ಪಾಕಿಸ್ತಾನಿ ಜೆಟ್‌ಗಳನ್ನು ಹೊಡೆದುರುಳಿಸಿ ಭಾರತವು ಮೇಲುಗೈ ಸಾಧಿಸಿದ್ದರೂ, ಪಿಒಕೆ ವಶಪಡಿಸಿಕೊಳ್ಳದೇ 'ಕದನ ವಿರಾಮ'ಕ್ಕೆ ಒಪ್ಪಿಕೊಂಡಿದ್ದಕ್ಕೆ ವಿಪಕ್ಷಗಳು ಟೀಕಿಸಿದ್ದವು.
ಎರಡು ದಿನಗಳ ಮೊರಾಕ್ಕೊ ಪ್ರವಾಸದಲ್ಲಿರುವ ರಾಜನಾಥ್ ಸಿಂಗ್, ಬೆರೆಚಿಡ್‌ನಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್‌ನ ವೀಲ್ಡ್ ಆರ್ಮರ್ಡ್ ಪ್ಲಾಟ್‌ಫಾರ್ಮ್ (WhAP) 8x8 ಗಾಗಿ ಹೊಸ ಉತ್ಪಾದನಾ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ, ಇದು ಆಫ್ರಿಕಾದಲ್ಲಿ ಮೊದಲ ಭಾರತೀಯ ರಕ್ಷಣಾ ಉತ್ಪಾದನಾ ಘಟಕವಾಗಿದೆ. (ಏಜೆನ್ಸೀಸ್)